ADVERTISEMENT

₹5 ಲಕ್ಷ ಲಂಚ ಪಡೆದ ಆರೋಪ ಪ್ರಕರಣ: ಉಪ ತಹಶೀಲ್ದಾರ್ ಜಾಮೀನು ವಿಚಾರಣೆ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2022, 4:16 IST
Last Updated 14 ಜುಲೈ 2022, 4:16 IST
ಹೈಕೋರ್ಟ್
ಹೈಕೋರ್ಟ್    

ಬೆಂಗಳೂರು:ಭೂ ವ್ಯಾಜ್ಯವೊಂದರ ಮೇಲ್ಮನವಿ ವಿಚಾರಣೆಗೆ ಸಂಬಂಧಿಸಿದಂತೆ ₹5 ಲಕ್ಷ ಲಂಚ ಪಡೆದ ಆರೋಪದಲ್ಲಿ ಜೈಲಿನಲ್ಲಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪ ತಹಶೀಲ್ದಾರ್ ಪಿ.ಎಸ್.ಮಹೇಶ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಇದೇ 18ಕ್ಕೆ ಮುಂದೂಡಿದೆ.

ಈ ಕುರಿತ ಅರ್ಜಿಯ ವಿಚಾರಣೆ ಬುಧವಾರ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಬಂದಾಗ ನ್ಯಾಯಾಂಗ ರಿಜಿಸ್ಟ್ರಾರ್ ಅವರು ಈ ಕುರಿತಂತೆ ಸುಪ್ರೀಂಕೋರ್ಟ್‌ನಲ್ಲಿ ಎಸ್ಎ‌ಲ್‌ಪಿ (ವಿಶೇಷ ಮೇಲ್ಮನವಿ) ದಾಖಲಾಗಿದೆ ಎಂಬ ಸಂಗತಿಯನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಎಸಿಬಿ ಮತ್ತು ಅದರ ಮುಖ್ಯಸ್ಥ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್‌ ಸಲ್ಲಿಸಿರುವ ಎಸ್‌ಎಲ್‌ಪಿ ಸಂಬಂಧ ಸುಪ್ರೀಂಕೋರ್ಟ್ ಮಂಗಳವಾರವಷ್ಟೇ (ಜುಲೈ 12) ನೀಡಿರುವ ಆದೇಶವನ್ನು ಅವರು ನ್ಯಾಯಪೀಠಕ್ಕೆ ಅರುಹಿದರು.

ADVERTISEMENT

ಸುಪ್ರೀಂಕೋರ್ಟ್ ಎಸ್ಎ‌ಲ್‌ಪಿಯನ್ನು ಶುಕ್ರವಾರ (ಜುಲೈ 15) ವಿಚಾರಣೆಗೆ ಕೈಗೆತ್ತಿಕೊಳ್ಳಲಿದ್ದು, ಅಲ್ಲಿಯವರೆಗೆ ಹೈಕೋರ್ಟ್ ಈ ಪ್ರಕರಣದ ವಿಚಾರಣೆ ಮುಂದೂಡುವಂತೆ ಆದೇಶಿಸಿರುವುದನ್ನು ನ್ಯಾಯಪೀಠಕ್ಕೆ ವಿವರಿಸಿದರು.ಇದನ್ನು ಪರಿಗಣಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿ ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.