ಬೆಂಗಳೂರು: ‘ರಾಜ್ಯದಲ್ಲಿ ವಾರದಿಂದ ಕೋವಿಡ್ ಪ್ರಕರಣಗಳಲ್ಲಿ ಕೊಂಚ ಏರಿಕೆಯಾಗಿದ್ದು, ತೀವ್ರ ಉಸಿರಾಟ ಸಮಸ್ಯೆ ಪ್ರಕರಣಗಳಲ್ಲಿ (ಸಾರಿ) ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ನಡೆಸಲು ಸೂಚಿಸಲಾಗಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ರಾಜ್ಯದಲ್ಲಿ ಒಟ್ಟು 35 ಮಂದಿ ಕೋವಿಡ್ ಪೀಡಿತರಾಗಿದ್ದು, ಬೆಂಗಳೂರಿನಲ್ಲಿ 32 ಪ್ರಕರಣಗಳು ವರದಿಯಾಗಿವೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶುಕ್ರವಾರ ಈ ಬಗ್ಗೆ ಚರ್ಚೆ ನಡೆಸಿದೆ’ ಎಂದರು.
‘ಕೋವಿಡ್ ಪೀಡಿತರಿಗೆ ಸಣ್ಣ ಪ್ರಮಾಣದ ಲಕ್ಷಣಗಳನ್ನು ಹೊರತುಪಡಿಸಿದರೆ, ಗಂಭೀರವಾದ ಸಮಸ್ಯೆಗಳು ಕಾಣಿಸಿಕೊಂಡಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಸಾರಿ ಪ್ರಕರಣಗಳಲ್ಲಿ ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಸೂಚನೆ ನೀಡಲಾಗಿದೆ. ಉಸಿರಾಟ ಹಾಗೂ ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ದಾಖಲಾದ ಆಸ್ಪತ್ರೆಗಳಲ್ಲಿ ಗಂಟಲ ದ್ರವದ ಮಾದರಿ ಸಂಗ್ರಹಿಸಿ, ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ’ ಎಂದರು.
‘ಅಗತ್ಯ ಪರೀಕ್ಷಾ ಕಿಟ್‌ಗಳನ್ನು ಖರೀದಿಸಲಾಗಿದೆ. ಅಗತ್ಯವಿದ್ದಲ್ಲಿ ಮಾತ್ರ ಪರೀಕ್ಷೆ ನಡೆಸಲಾಗುತ್ತದೆ. ಸ್ವಯಂಪ್ರೇರಿತರಾಗಿಯೂ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬಹುದು. ಪರೀಕ್ಷಾ ಪ್ರಯೋಗಾಲಯಗಳನ್ನು ಪುನರಾರಂಭ ಮಾಡಲಾಗುತ್ತಿದೆ. ಕೋವಿಡ್ ಪೀಡಿತರಿಗೆ ಪ್ರತ್ಯೇಕ ವಾರ್ಡ್ ನಿರ್ಮಾಣದ ಪ್ರಸ್ತಾವ ಸದ್ಯಕ್ಕೆ ಇಲ್ಲ. ಜ್ವರದ ತೀವ್ರತೆ ಆಧಾರದಲ್ಲಿ ಆಸ್ಪತ್ರೆ ಅಥವಾ ಮನೆಯಲ್ಲಿ ಆರೈಕೆಗೆ ಒಳಪಡಬಹುದು’ ಎಂದು ಹೇಳಿದರು.
‘ಮುಖಗವಸು ಧರಿಸುವುದರಿಂದ ವಿವಿಧ ವೈರಾಣುಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ. ಮಳೆಗಾಲದ ಈ ಸಂದರ್ಭದಲ್ಲಿ ಸೋಂಕು ರೋಗಗಳು ಹರಡುವ ಸಂಭವವಿರುತ್ತದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ, ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ವಿವಿಧ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಮುಖಗವಸು ಧರಿಸುವುದು ಉತ್ತಮ. ಆದರೆ, ಕಡ್ಡಾಯವಲ್ಲ’ ಎಂದರು.
ಕೋವಿಡ್ ಪ್ರಕರಣಗಳಲ್ಲಿ ಗಂಭೀರತೆ ಕಂಡುಬಂದಿಲ್ಲ. ಆದ್ದರಿಂದ ಯಾರೂ ಭಯ ಪಡಬೇಕಾಗಿಲ್ಲ. ಎಲ್ಲರೂ ಸಹಜ ಜೀವನ ನಡೆಸಬಹುದು.ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.