ಪ್ರಜಾವಾಣಿ ವಾರ್ತೆ
ಬೆಂಗಳೂರು: ದೇವನಹಳ್ಳಿ ತಾಲ್ಲೂಕು, ಚನ್ನರಾಯಪಟ್ಟಣ ಹೋಬಳಿಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಬೇಕು. ಬಂಧಿಸಿರುವ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಸಿಪಿಐ (ಎಂ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಘಟಕಗಳು ಗುರುವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದವು.
ಬಲವಂತದ ಭೂಸ್ವಾಧೀನವನ್ನು ವಿರೋಧಿಸಿ ದೇವನಹಳ್ಳಿಯ 13 ಗ್ರಾಮಗಳ ರೈತರು 1177 ದಿನಗಳಿಂದ ವಿವಿಧ ಮಾದರಿಯಲ್ಲಿ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದರು. ಸರ್ಕಾರ ಕಿವಿಕೊಡದ ಕಾರಣ ಬುಧವಾರ ದೇವನಹಳ್ಳಿ ಸಂತೇ ಮೈದಾನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಸರ್ಕಾರವು ಪೊಲೀಸರ ಮೂಲಕ ಪ್ರತಿಭಟನಕಾರರನ್ನು ಹತ್ತಿಕ್ಕುತ್ತಿದೆ ಎಂದು ಸಿಪಿಐ(ಎಂ) ಮುಖಂಡರು ಆರೋಪಿಸಿದರು.
ರೈತರ ಪ್ರತಿಭಟನೆ ಬೆಂಬಲಿಸಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನರು ಸೇರಿದ್ದರು. ಇಡೀ ದಿನ ಶಾಂತಿಯುತವಾಗಿ ಹೋರಾಟ ನಡೆಯುತ್ತಿತ್ತು. ಅನಿರ್ದಿಷ್ಟಾವಧಿ ಹೋರಾಟ ಮಾಡಲು ನಿರ್ಧರಿಸಲಾಗಿತ್ತು. ಸಂಜೆ ಏಕಾಏಕಿ ನುಗ್ಗಿದ ಪೊಲೀಸರು ಪ್ರತಿಭಟನಕಾರರನ್ನು ಎಳೆದಾಡಿ ಬಂಧಿಸಿದ್ದಾರೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಯು. ಬಸವರಾಜ್, ಕೆ. ಮಹಾಂತೇಶ್, ಗೋಪಾಲಕೃಷ್ಣ ಅರಳಹಳ್ಳಿ, ರಾಜ್ಯ ಸಮಿತಿ ಸದಸ್ಯರಾದ ಪ್ರತಾಪ್ ಸಿಂಹ, ಬಾಲಕೃಷ್ಣ ಶೆಟ್ಟಿ, ಗೌರಮ್ಮ, ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಟಿ. ಯಶವಂತ ಸಹಿತ ಅನೇಕರು ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.