ಬೆಂಗಳೂರು: ಬೆಲೆ ಏರಿಕೆ ಕೈ ಬಿಡುವಂತೆ ಆಗ್ರಹಿಸಿ ಸಿಪಿಎಂ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಹಾಲು, ಮೊಸರು, ವಿದ್ಯುತ್, ಮೆಟ್ರೊ ಪ್ರಯಾಣ, ಸಾರ್ವಜನಿಕ ಸಾರಿಗೆ, ಡೀಸೆಲ್, ಟೋಲ್ ದರ ಏರಿಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರವೇ ನೇರ ಕಾರಣ ಎಂದು ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.
ಯುಗಾದಿ ಹಬ್ಬದ ಮುನ್ನವೇ ರಾಜ್ಯದ ಜನರು ಹಾಲು, ಮೊಸರಿನ ಬೆಲೆ ಹಾಗೂ ವಿದ್ಯುತ್, ಕಸ ಸಂಗ್ರಹಣೆ ದರ ಏರಿಕೆಯ ಕಹಿಯನ್ನು ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ರಾಜ್ಯ ಸರ್ಕಾರವು ಡೀಸೆಲ್ ದರ ಹಾಗೂ ಕೇಂದ್ರ ಸರ್ಕಾರವು ಟೋಲ್ ದರ ಏರಿಕೆ ಮಾಡಿರುವುದು ಖಂಡನೀಯ ಎಂದು ಪ್ರತಿಭಟನಕಾರರು ಹೇಳಿದರು.
ಆಸ್ತಿ ನೋಂದಣಿ ಶುಲ್ಕ, ಸಾರ್ವಜನಿಕ ಸಾರಿಗೆಯ ಪ್ರಯಾಣದ ದರ, ವಾಹನ ನೋಂದಣಿ ಶುಲ್ಕ, ಬಿತ್ತನೆ ಬೀಜ ಹಾಗೂ ರಸಗೊಬ್ಬರ ದರ, ಆಸ್ತಿ ತೆರಿಗೆ, ಸರ್ಕಾರಿ ಕಾಲೇಜುಗಳ ಪ್ರವೇಶ ಶುಲ್ಕವನ್ನೂ ಹೆಚ್ಚಿಸಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಿವೆ ಎಂದು ಹೇಳಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆಯು ಜನಸಾಮಾನ್ಯರ ಬದುಕಿನ ಮೇಲೆ ನೇರ ಪರಿಣಾಮ ಬೀರಲಿದೆ. ತಕ್ಷಣವೇ ಬೆಲೆ ಏರಿಕೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
‘ಗ್ಯಾರಂಟಿ ಯೋಜನೆಗಳಿಗೆ ಹಣ ನೀಡುವ ನೆಪದಲ್ಲಿ ರಾಜ್ಯ ಸರ್ಕಾರವು ಸಾಮಾನ್ಯರ ಬದುಕಿನ ಮೇಲೆ ಬೆಲೆ ಏರಿಕೆಯ ಪ್ರಹಾರವನ್ನೇ ಮಾಡಿದೆ. ಶಾಸಕರ ಸಂಬಳ ಹಾಗೂ ಭತ್ಯೆಗಳನ್ನು ಯಾವುದೇ ನಾಚಿಕೆಯಿಲ್ಲದೇ ಹೆಚ್ಚಿಸಿಕೊಳ್ಳಲಾಗಿದೆ. ಸಾಮಾನ್ಯ ಜನರ ಬದುಕಿಗೆ ಮಾತ್ರ ಯಾವುದೇ ರಿಯಾಯಿತಿ ನೀಡದೇ ಇರುವುದು ಖಂಡನೀಯ’ ಎಂದು ಸಿಪಿಐಎಂನ ಬೆಂಗಳೂರು ಉತ್ತರ ಜಿಲ್ಲಾ ಸಮಿತಿ ಕಾರ್ಯದರ್ಶಿ ಎನ್.ಪ್ರತಾಪ್ ಸಿಂಹ ಹೇಳಿದರು.
‘ಬೆಲೆ ಏರಿಕೆ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಯಿಂದ ಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರ ಬದುಕಿನ ಪ್ರಶ್ನೆ ಬಂದಾಗ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು ಎಂಬುದು ಡೀಸೆಲ್ ಹಾಗೂ ಟೋಲ್ ದರ ಏರಿಕೆಯಿಂದ ಸಾಬೀತಾಗಿದೆ. ಇಂತಹ ಬೆಲೆ ಏರಿಕೆ ನೀತಿಯನ್ನು ತಕ್ಷಣವೇ ಕೈಬಿಡಬೇಕು’ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಬಿ.ಎನ್.ಮಂಜುನಾಥ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.