ADVERTISEMENT

ಸುಪ್ರೀಂ ಕೋರ್ಟ್‌ ತೀರ್ಪು ಅನುಷ್ಠಾನಗೊಳಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಮೇ 2023, 19:51 IST
Last Updated 29 ಮೇ 2023, 19:51 IST
ಸುಪ್ರೀಂ ಕೋರ್ಟ್‌ ತೀರ್ಪು ಜಾರಿಗೊಳಿಸುವಂತೆ ಆಗ್ರಹಿಸಿ ‘ಇಪಿಎಸ್‌–95 ಬೆಮಸಾ ಮತ್ತು ಕರಾಸ ನಿವೃತ್ತ ನೌಕರರ ಸಂಘ’ದ ಸದಸ್ಯರು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರಿಗೆ ಸೋಮವಾರ ಮನವಿ ಸಲ್ಲಿಸಿದರು.
ಸುಪ್ರೀಂ ಕೋರ್ಟ್‌ ತೀರ್ಪು ಜಾರಿಗೊಳಿಸುವಂತೆ ಆಗ್ರಹಿಸಿ ‘ಇಪಿಎಸ್‌–95 ಬೆಮಸಾ ಮತ್ತು ಕರಾಸ ನಿವೃತ್ತ ನೌಕರರ ಸಂಘ’ದ ಸದಸ್ಯರು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರಿಗೆ ಸೋಮವಾರ ಮನವಿ ಸಲ್ಲಿಸಿದರು.   

ಬೆಂಗಳೂರು: ಇಪಿಎಫ್‌ಒ ಅಧಿಕಾರಿಗಳು ಸುಪ್ರೀಂ ಕೋರ್ಟ್‌ ತೀರ್ಪು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ಕೇಂದ್ರೀಯ ಭವಿಷ್ಯ ನಿಧಿ ಆಯುಕ್ತರಿಗೆ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರ ಮೂಲಕ ‘ಇಪಿಎಸ್–95 ಬೆಮಸಾ ಮತ್ತು ಕರಾಸ ನಿವೃತ್ತ ನೌಕರರ ಸಂಘ’ ಮನವಿ ಸಲ್ಲಿಸಿದೆ.

‘2022ರ ನವೆಂಬರ್ 4ರಂದು ಸುನೀಲ್‌ ಕುಮಾರ್‌ ಹಾಗೂ ಇತರರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ಅಂತಿಮ ತೀರ್ಪುನ್ನು ಇದುವರೆಗೂ ಅನುಷ್ಠಾನಗೊಳಿಸಿಲ್ಲ. ಇಪಿಎಫ್‌ಒ  ಕಚೇರಿಯಿಂದ ಇದುವರೆಗೂ ಒಂಬತ್ತು ಸುತ್ತೋಲೆಗಳನ್ನು ಹೊರಡಿಸಿದ್ದರೂ, ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಪೂರಕವಾಗಿಲ್ಲ. ಈ ಎಲ್ಲ ಸುತ್ತೋಲೆಗಳು ನಿವೃತ್ತರ ಹಿತಾಸಕ್ತಿಗೆ ಮಾರಕವಾಗಿವೆ’ ಎಂದು ಸಂಘದ ಅಧ್ಯಕ್ಷ ಶಂಕರ್‌ ಕುಮಾರ್‌ ದೂರಿದ್ದಾರೆ.

‘ದೇಶದ ವಿವಿಧ ಸಂಸ್ಥೆಗಳಲ್ಲಿ ಲಕ್ಷಾಂತರ ಮಂದಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಈಗ ನೀಡುತ್ತಿರುವ ಪಿಂಚಣಿಯಿಂದ ಜೀವನ ಸಾಗಿಸುವುದೇ ಕಷ್ಟಕರ. ಅನೇಕ ಪ್ರತಿಭಟನೆಗಳು, ಚಳವಳಿ ನಡೆಸಿದರೂ ಇಪಿಎಫ್‌ಒ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. 2014ಕ್ಕೂ ಮೊದಲು ನಿವೃತ್ತರಾದವರಿಗೆ ಪಿಂಚಣಿ ನೀಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಆನ್‌ಲೈನ್‌ ಅರ್ಜಿ ಸಲ್ಲಿಕೆಯ ಬಗ್ಗೆ ನೌಕರರಿಗೆ ತಿಳಿವಳಿಕೆ ನೀಡಬೇಕು. ಈ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು. ಹಲವಾರು ಗೊಂದಲಗಳಿಗೆ ಇಪಿಎಫ್‌ಒ ಕಚೇರಿ ಹೊರಡಿಸುವ ವಿವಾದಿತ ಸುತ್ತೋಲೆಗಳೇ ಕಾರಣವಾಗುತ್ತಿವೆ’ ಎಂದು ದೂರಿದರು.

‘ಬಹುತೇಕ ನಿವೃತ್ತರು ಅನಾರೋಗ್ಯದಿಂದ ಬಳಲುತ್ತಿದ್ದು, ಯಾವುದೇ ರೀತಿಯ ವಿಮೆ ಸೌಲಭ್ಯಗಳಿಲ್ಲ. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಯಥಾವತ್ತಾಗಿ ಕೂಡಲೇ ಅನುಷ್ಠಾನಗೊಳಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.