ADVERTISEMENT

ಪಿಟಿಸಿಎಲ್‌ ಕಾಯ್ದೆ: ಬಾಯಿಬಡಿದುಕೊಂಡು ಪ್ರತಿಭಟನೆ

ತಿದ್ದುಪಡಿ ಮಾಡುವಂತೆ ಮುಖ್ಯಮಂತ್ರಿಗೆ ವಿವಿಧ ಸಂಘಟನೆಗಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 21:37 IST
Last Updated 6 ಡಿಸೆಂಬರ್ 2022, 21:37 IST
ವಿಧಾನಸೌಧದ ಮುಂದೆ ಮಂಗಳವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್‌ ಅವರ ಮಹಾ ಪರಿನಿರ್ವಾಣ ದಿನದ ವೇಳೆ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ, ಜಂಬೂದ್ವೀಪ ಜನ ಸೇನೆಯ ಸದಸ್ಯರು ಪಿಟಿಸಿಎಲ್ ಕಾಯ್ದೆಯನ್ನು ತಿದ್ದುಪಡಿಗೆ ಆಗ್ರಹಿಸಿ ಮುಖ್ಯಮಂತ್ರಿ ಸಮ್ಮುಖದಲ್ಲಿ ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ. 
ವಿಧಾನಸೌಧದ ಮುಂದೆ ಮಂಗಳವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್‌ ಅವರ ಮಹಾ ಪರಿನಿರ್ವಾಣ ದಿನದ ವೇಳೆ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ, ಜಂಬೂದ್ವೀಪ ಜನ ಸೇನೆಯ ಸದಸ್ಯರು ಪಿಟಿಸಿಎಲ್ ಕಾಯ್ದೆಯನ್ನು ತಿದ್ದುಪಡಿಗೆ ಆಗ್ರಹಿಸಿ ಮುಖ್ಯಮಂತ್ರಿ ಸಮ್ಮುಖದಲ್ಲಿ ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ.    

ಬೆಂಗಳೂರು: ಕರ್ನಾಟಕ ಪರಿಶಿಷ್ಟ ಜಾತಿ, ಪಂಗಡಗಳ ಭೂ ಪರಭಾರೆ ನಿಷೇಧ ಕಾಯ್ದೆ (ಪಿಟಿಸಿಎಲ್‌) ತಿದ್ದುಪಡಿಗೆ ಆಗ್ರಹಿಸಿ ಪಿಟಿಸಿಎಲ್‌ ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ, ಜಂಬೂದ್ವೀಪ ಜನ ಸೇನೆ, ದಸಂಸ, ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದ ಸದಸ್ಯರು ಮಂಗಳವಾರ ಅಂಬೇಡ್ಕರ್‌ ಪ್ರತಿಮೆ ಮುಂದೆ, ಮುಖ್ಯಮಂತ್ರಿ ಸಮ್ಮುಖದಲ್ಲಿ ಬಾಯಿ ಬಡಿದುಕೊಂಡು ಪ್ರತಿಭಟನೆ ನಡೆಸಿದರು.

ಸ್ವಾತಂತ್ರ್ಯ ದೊರೆತು 75 ವರ್ಷಗಳು ಕಳೆದರೂ, ಪರಿಶಿಷ್ಟರೂ ಸೇರಿದಂತೆ ಹಲವು ಶೋಷಿತ ಸಮುದಾಯಗಳು ನಾಗರಿಕ ಸಮಾಜದ ಮೂಲ ಸೌಲಭ್ಯಗಳಿಂದ ವಂಚಿತವಾಗಿವೆ. ದೇಶದ ಜನಸಂಖ್ಯೆಯಲ್ಲಿ ಶೇ 30ರಷ್ಟಿರುವ ಪರಿಶಿಷ್ಟರು ಬಲಾಢ್ಯರ ದೌರ್ಜನ್ಯಕ್ಕೆ ಒಳಗಾಗುತ್ತಾ ತಮ್ಮ ಭೂಮಿ, ಆಸ್ತಿ ಕಳೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತರು, ಶೋಷಿತರ ಪರವಾಗಿ ಧ್ವನಿ ಎತ್ತಿದ ಪ್ರೊ.ಬಿ.ಕೃಷ್ಣಪ್ಪ ಅವರ ಹೋರಾಟದ ಫಲವಾಗಿ ದೇವರಾಜ ಅರಸು ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದ ಬಸವಲಿಂಗಪ್ಪ ಅವರುಪಿಟಿಸಿಎಲ್‌ ಕಾಯ್ದೆ ಜಾರಿಗೆ ತಂದರು. ಈ ಕಾಯ್ದೆಯನ್ನು ಸುಪ್ರೀಂಕೋರ್ಟ್‌ ಸಹ ಎತ್ತಿಹಿಡಿದಿದೆ. ಆದರೂ, ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಪರಿಶಿಷ್ಟರಿಗೆ ವಿರುದ್ಧವಾದ ಆದೇಶಗಳು ಜಾರಿಯಾಗುತ್ತಿವೆ ಎಂದು ದೂರಿದರು.

ADVERTISEMENT

ರಾಜ್ಯದ 15 ಸಾವಿರ ಪ್ರಕರಣಗಳಲ್ಲಿ ಪರಿಶಿಷ್ಟರಿಗೆ ಅನ್ಯಾಯವಾಗಿದೆ. ಕಾಯ್ದೆಯ ವಿರುದ್ಧ ತೀರ್ಪಿನಿಂದ ಸಾವಿರಾರು ಕುಟುಂಬಗಳು ಬೀದಿಪಾಲಾಗಿವೆ. ದಲಿತ ಸಂಘಟನೆಗಳ ಪ್ರತಿಭಟನೆಗಳಿಗೆ ಸರ್ಕಾರ ಸ್ಪಂದಿಸಿ, ಕಂದಾಯ ಇಲಾಖೆ ಕಾಯ್ದೆಯ ಪ್ರಕರಣಗಳಿಗೆ ಕಾಲಮಿತಿ ಅನ್ವಯವಾಗದು ಎಂದು ಸುತ್ತೋಲೆ ಹೊರಡಿಸಿದ್ದರೂ, ನ್ಯಾಯದಾನದಲ್ಲಿ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಕಾಯ್ದೆಗೆ ತಕ್ಷಣ ತಿದ್ದುಪಡಿ ತರಬೇಕು. ಪರಿಶಿಷ್ಟರು ಬೀದಿಪಾಲಾಗುವುದನ್ನು ತಪ್ಪಿಸಬೇಕು. ಕಾಲಮಿತಿ ಅನ್ವಯಿಸಬಾರದು. ತಕ್ಷಣ ಸುಗ್ರೀವಾಜ್ಞೆ ಹೊರಡಿಸಬೇಕು. ಬೇಡಿಕೆ ಈಡೇರಿಸದಿದ್ದರೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಂಘಟನೆಯ ಮುಖಂಡರಾದ ಹೆಣ್ಣೂರು ಶ್ರೀನಿವಾಸ್‌, ಜಂಬುದ್ವೀಪ ಸಿದ್ದರಾಜು, ರಮೇಶ್, ಪಿಟಿಸಿಲ್‌ ಮಂಜುನಾಥ್‌, ವೆಂಕಟೇಶ್, ರಂಗನಾಯಕ್, ಮುಂಜು ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.