ADVERTISEMENT

ಪಿಯು ಕಾಲೇಜುಗಳಿಗೆ ಪ್ರವೇಶ: ವಾಣಿಜ್ಯ, ವಿಜ್ಞಾನಕ್ಕೆ ಹೆಚ್ಚಿದ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 23 ಮೇ 2022, 19:48 IST
Last Updated 23 ಮೇ 2022, 19:48 IST

ಬೆಂಗಳೂರು: ಈ ಬಾರಿಯೂ ಪಿಯು ಮೊದಲ ವರ್ಷಕ್ಕೆ ವಾಣಿಜ್ಯ ವಿಭಾಗಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ‌. ಜತೆಗೆ ವಿಜ್ಞಾನ ಕೋರ್ಸ್‌ಗೂ ಮತ್ತೆ ಬೇಡಿಕೆ ಬಂದಿದೆ.

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾದ ಬಳಿಕ ವಿದ್ಯಾರ್ಥಿಗಳು ಪಿಯು ಕಾಲೇಜಗಳ ಮೆಟ್ಟಿಲೇರುತ್ತಿದ್ದಾರೆ. ಉದ್ಯೋಗಾವಕಾಶಗಳು ಹೆಚ್ಚುತ್ತಿರುವುದರಿಂದ ಇತ್ತೀಚಿನ ವರ್ಷಗಳಲ್ಲಿಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

’ಕಡಿಮೆ ಆದಾಯ ಇರುವ ಕೆಲವು ವಿದ್ಯಾರ್ಥಿಗಳು ಪಿಯು ಮುಗಿದ ತಕ್ಷಣ ಉದ್ಯೋಗ ಮಾಡಲು ಬಯಸುತ್ತಾರೆ. ಹೀಗಾಗಿ, ಕಂಪ್ಯೂಟರ್‌ ಜ್ಞಾನಮತ್ತು ವಾಣಿಜ್ಯ ವಿಷಯಗಳ ಪರಿಣತಿಯಿಂದ ಉದ್ಯೋಗಗಳು ದೊರೆಯುವುದು ಸುಲಭ ಎನ್ನುವ ಅಭಿಪ್ರಾಯ ಮೂಡಿದೆ. ಹೀಗಾಗಿ, ವಾಣಿಜ್ಯ ಕೋರ್ಸ್‌ಗೆ ಬೇಡಿಕೆ ಸಾಮಾನ್ಯ’ ಎಂದು ಅಧ್ಯಾಪಕರು ಹೇಳುತ್ತಾರೆ.

ADVERTISEMENT

ಈ ಬಾರಿ ವಿಜ್ಞಾನ ಅಧ್ಯಯನಕ್ಕೆ ವಿದ್ಯಾರ್ಥಿಗಳು ಹೆಚ್ಚು ಒಲವು ತೋರುತ್ತಿದ್ದಾರೆ. ಶೇ 80ಕ್ಕಿಂತ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳು ವಿಜ್ಞಾನ ಕೋರ್ಸ್‌ ಆಯ್ಕೆ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ.

ಜತೆಗೆ, ಆಧುನಿಕ ತಂತ್ರಜ್ಞಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಳ್ಳಲು ಕಾರಣವಾಗಿದೆ. ಮಷಿನ್‌ ಲರ್ನಿಂಗ್‌ (ಎಂಎಲ್‌) ಮತ್ತು ಕೃತಕ ಬುದ್ಧಿಮತ್ತೆಯಂತ (ಎಐ) ಬೇಡಿಕೆ ಇರುವ ಕೋರ್ಸ್‌ಗಳ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಹೀಗಾಗಿ, ಪಿಯುನಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದುಪ್ರಾಂಶುಪಾಲರೊಬ್ಬರು ತಿಳಿಸಿದರು.

ಕಳೆದ ಐದು ವರ್ಷಗಳಿಂದ ವಿಜ್ಞಾನ ವಿಭಾಗವು ಆಕರ್ಷಣೆ ಕಳೆದುಕೊಂಡಿತ್ತು. ಎಂಜಿನಿಯರಿಂಗ್‌ ಸೀಟುಗಳು ಸಹ ಖಾಲಿ ಉಳಿಯುವುದು ಸಾಮಾನ್ಯವಾಗಿದೆ. ಆದರೆ, ಕೋವಿಡ್‌ ನಂತರ ತಂತ್ರಜ್ಞಾನದಲ್ಲಿಹಲವು ರೀತಿಯ ಬೆಳವಣಿಗೆಗಳು ಆಗಿರುವುದರಿಂದ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಲು ಕಾರಣ ಎಂದು ಅವರು ವಿವರಿಸಿದರು.

ಪ್ರವೇಶಕ್ಕೆ ತೊಡಕು: ಬಹುತೇಕ ಪ್ರಾಧ್ಯಾಪಕರು ಪಿಯು ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿರುವುದರಿಂದ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಗೆ ತೊಡಕಾಗಿದೆ ಎಂದು ಅಧ್ಯಾಪಕರೊಬ್ಬರು ದೂರಿದರು.

ಸರ್ಕಾರಿ ಕಾಲೇಜುಗಳಿಗೂ ಹೆಚ್ಚಿದ ಬೇಡಿಕೆ
ಮೂಲಸೌಕರ್ಯಗಳು ಸುಧಾರಿಸಿರುವುದರಿಂದ ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಆಸಕ್ತಿ ತೋರಿಸುತ್ತಿದ್ದಾರೆ.

ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ನಿರ್ಬಂಧ ವಿಧಿಸಿಲ್ಲ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದರೆ ಮತ್ತೊಂದು ವಿಭಾಗವನ್ನು ತೆರೆಯಲು ಅನುಮತಿ ನೀಡುವುದಾಗಿ ಸರ್ಕಾರ ತಿಳಿಸಿದೆ.

‘ಶಾಸಕರ ಅನುದಾನದಲ್ಲಿ ಕಾಲೇಜುಗಳನ್ನು ಸುಧಾರಿಸುವ ಕಾರ್ಯಗಳು ನಡೆಯುತ್ತಿವೆ. ಮೂಲಸೌಕರ್ಯಗಳನ್ನು ಕಲ್ಪಿಸಲು ಶಾಸಕರು ನೆರವಾಗುತ್ತಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ನೇಮಕವಾದರೆ ಸರ್ಕಾರಿ ಕಾಲೇಜುಗಳಲ್ಲಿ ಫಲಿತಾಂಶ ಮತ್ತಷ್ಟು ಸುಧಾರಿಸಲಿದೆ. ನಮ್ಮ ಕಾಲೇಜಿನಲ್ಲಿ ಮೊದಲು 450 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದರು. ಈಗ ವಿದ್ಯಾರ್ಥಿಗಳ ಸಂಖ್ಯೆ 700 ದಾಟಿದೆ’ ಎಂದು ಅಗರ–ಎಚ್‌ಎಸ್‌ಆರ್‌ ಬಡಾವಣೆಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಾಜಗೋಪಾಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.