ADVERTISEMENT

ಇಂಗ್ಲೆಂಡ್‌ನಲ್ಲಿ ಕೆಲಸ ಕೊಡಿಸುವ ಆಮಿಷ: ₹1.78 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 21:52 IST
Last Updated 10 ಏಪ್ರಿಲ್ 2021, 21:52 IST

ಬೆಂಗಳೂರು: ಇಂಗ್ಲೆಂಡ್‌ನಲ್ಲಿ ಕೆಲಸಕ್ಕೆ ಆಯ್ಕೆಯಾಗಿರುವುದಾಗಿ ನಂಬಿಸಿ ವಿಸಾ ಕೊಡಿಸುವ ನೆಪದಲ್ಲಿ ₹ 1.78 ಲಕ್ಷ ಪಡೆದು ವಂಚಿಸಿರುವ ಬಗ್ಗೆ ಈಶಾನ್ಯ ವಿಭಾಗದ ಸೈಬರ್‌ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಣಸಮಾರನಹಳ್ಳಿ ನಿವಾಸಿಯಾಗಿರುವ 30 ವರ್ಷದ ಯುವತಿ ಠಾಣೆಗೆ ದೂರು ನೀಡಿದ್ದಾರೆ.

‘ಇಂಗ್ಲೆಂಡ್‌ನ ಹೋಟೆಲೊಂದರಲ್ಲಿ ಕೆಲಸಕ್ಕಾಗಿ ಯುವತಿ ಫೆ. 5ರಂದು ವೈಯಕ್ತಿಕ ವಿವರ ಸಮೇತ ಅರ್ಜಿ ಸಲ್ಲಿಸಿದ್ದರು. ಈ ಮಾಹಿತಿ ತಿಳಿದುಕೊಂಡ ಆರೋಪಿ, ಯುವತಿಗೆ ಕರೆ ಮಾಡಿದ್ದ. ‘ನೀವು ಹೋಟೆಲ್‌ ಪ್ರತಿನಿಧಿ ಕೆಲಸಕ್ಕೆ ಆಯ್ಕೆಯಾಗಿದ್ದೀರಿ. ಇಂಗ್ಲೆಂಡ್‌ಗೆ ಬರಲು ನಿಮಗೆ ವಿಸಾ ಅಗತ್ಯವಿದೆ. ಅದನ್ನು ಮಾಡಿಸಲು ರವೀನ್ ಬಲೀಂದ್ರ ಎಂಬಾತನನ್ನು ಸಂಪರ್ಕಿಸಿ’ ಎಂದು ಆತ ಹೇಳಿದ್ದ. ಈ ಸಂಗತಿ ದೂರಿನಲ್ಲಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ಆರೋಪಿ ಮಾತು ನಂಬಿದ್ದ ಯುವತಿ, ರವೀನ್‌ನನ್ನು ಸಂಪರ್ಕಿಸಿದ್ದರು. ಆತ, ಕೆಲಸದ ನೇಮಕಾತಿ ಪತ್ರವನ್ನೂ ಕಳುಹಿಸಿದ್ದ. ‘ವಿಸಾ ಮಾಡಿಸಲು ಪೊಲೀಸ್ ಪರಿಶೀಲನಾ ಪ್ರಮಾಣ ಪತ್ರ, ವೈದ್ಯಕೀಯ ಪರೀಕ್ಷಾ ಪ್ರಮಾಣ ಪತ್ರ ಹಾಗೂ ಇತರೆ ಪತ್ರಗಳು ಬೇಕು. ಅದಕ್ಕಾಗಿ ಶುಲ್ಕ ಪಾವತಿ ಮಾಡಬೇಕು’ ಎಂದು ಆರೋಪಿ ಹೇಳಿದ್ದ. ಅದನ್ನೂ ನಂಬಿದ್ದ ಯುವತಿ, ಹಂತ ಹಂತವಾಗಿ ₹1.78 ಲಕ್ಷ ಪಾವತಿಸಿದ್ದರು. ಅದಾದ ನಂತರ, ಆರೋಪಿಗಳು ನಾಪತ್ತೆಯಾಗಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.