ADVERTISEMENT

ನಕಲಿ ಸಿಡಿಆರ್: ಐವರು ಸಹಾಯಕ ಎಂಜಿನಿಯರ್‌ಗಳ ಸೆರೆ

ಬಿಡಿಎ; ನಕಲಿ ಸಿಡಿಆರ್ ಸೃಷ್ಟಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 21:35 IST
Last Updated 11 ಫೆಬ್ರುವರಿ 2021, 21:35 IST

ಬೆಂಗಳೂರು: ನಕಲಿ ಖಚಿತ ಅಳತೆ ವರದಿ (ಸಿಡಿಆರ್‌) ಸೃಷ್ಟಿಸಿ ಬಡಾವಣೆ ಯೋಜನೆಗಳಿಗೆ ಅನುಮತಿ ನೀಡಿದ್ದ, ನಿವೇಶನಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಸಹಕರಿಸುತ್ತಿದ್ದ ಆರೋಪದಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಐವರು ಸಹಾಯಕ ಎಂಜಿನಿಯರ್‌ಗಳನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಬನಶಂಕರಿ ಕಚೇರಿಯ ಎಂ.ಎಸ್. ಶಂಕರ್ ಮೂರ್ತಿ, ಆರ್‌.ಟಿ.ನಗರ ಕಚೇರಿಯ ಕೆ.ಎನ್. ರವಿಕುಮಾರ್, ಡಿ. ಶ್ರೀರಾಮ್, ಶಬ್ಬೀರ್ ಅಹಮ್ಮದ್ ಹಾಗೂ ಶ್ರೀನಿವಾಸ್ ಬಂಧಿತರು. ಅವರೆಲ್ಲ ಸಂಘಟಿತರಾಗಿ ಅಕ್ರಮದಲ್ಲಿ ಭಾಗಿಯಾಗಿದ್ದರು. ಈ ಬಗ್ಗೆ ಪುರಾವೆಗಳನ್ನು ಕಲೆಹಾಕಿ ಅವರನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಬಂಧಿತರಲ್ಲಿ ಒಬ್ಬರನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ. ಉಳಿದವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರನ್ನೂ ಕಸ್ಟಡಿಗೆ ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು’ ಎಂದೂ ಮೂಲಗಳು ಹೇಳಿವೆ.

ADVERTISEMENT

‘ಪ್ರಕರಣ ಸಂಬಂಧ ಬಿಡಿಎ ಗುತ್ತಿಗೆ ನೌಕರರು, ಮಧ್ಯವರ್ತಿಗಳು ಸೇರಿದಂತೆ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ಅವರ ಮೂಲಕ ಸೃಷ್ಟಿಸಲಾಗುತ್ತಿದ್ದ ನಕಲಿ ಸಿಡಿಆರ್‌ಗಳನ್ನೇ ಅಸಲಿ ಎಂಬುದಾಗಿ ಬಿಂಬಿಸಿ ಸಹಾಯಕ ಎಂಜಿನಿಯರ್‌ಗಳು, ಬಡಾವಣೆ ಯೋಜನೆಗಳಿಗೆ ಅನುಮೋದನೆ ನೀಡುತ್ತಿದ್ದರು. ಕ್ರಮಬದ್ಧವಿಲ್ಲದ ನಿವೇಶನಗಳಿಗೂ ನಕಲಿ ಸಿಡಿಆರ್‌ ಸೃಷ್ಟಿಸುತ್ತಿದ್ದರು’ ಎಂದೂ ಮೂಲಗಳು ತಿಳಿಸಿವೆ.

‘ಎಚ್‌ಬಿಆರ್ ಲೇಔಟ್ 2ನೇ ಹಂತದ ಕಾಚರಕನಹಳ್ಳಿಯಲ್ಲಿರುವ ಹಲವು ನಿವೇಶನಗಳಿಗೆ ಆರೋಪಿಗಳು, ನಕಲಿ ಸಿಡಿಆರ್‌ಗಳನ್ನು ಸೃಷ್ಟಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಅವರ ಜೊತೆಯಲ್ಲಿ ಮತ್ತಷ್ಟು ಆರೋಪಿಗಳು ಶಾಮೀಲಾಗಿರುವ ಅನುಮಾನವಿದ್ದು, ತನಿಖೆ ಮುಂದುವರಿದಿದೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.