ADVERTISEMENT

ಇ.ಡಿ ಮಾಜಿ ಅಧಿಕಾರಿ ವಿರುದ್ಧ ಎಫ್‌ಐಆರ್‌

ನಾಲ್ವರ ವಿರುದ್ಧ ಪ್ರಕರಣ, ಪೀಣ್ಯ ಪೊಲೀಸರಿಂದ ತನಿಖೆ

​ಪ್ರಜಾವಾಣಿ ವಾರ್ತೆ
Published 16 ಮೇ 2025, 0:03 IST
Last Updated 16 ಮೇ 2025, 0:03 IST
ಸೋಮಶೇಖರ್ 
ಸೋಮಶೇಖರ್    

ಬೆಂಗಳೂರು: ವಂಚನೆ ನಡೆಸಿದ ಆರೋಪದಡಿ ಜಾರಿ ನಿರ್ದೇಶನಾಲಯದ(ಇ.ಡಿ) ಮಾಜಿ ಸಹಾಯಕ ನಿರ್ದೇಶಕ ಸೇರಿ ನಾಲ್ವರ ವಿರುದ್ಧ ಇಲ್ಲಿನ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೀಣ್ಯಾ ಕೈಗಾರಿಕಾ ಪ್ರದೇಶದ ವಾಫೆ ಎಂಜಿನಿಯರಿಂಗ್‌ನ ನಿರ್ದೇಶಕ ನಿರಂಜನ್ ಎಸ್. ಮಯೂರ್ ಹಾಗೂ ಅವರ ತಂದೆ, ಜಾರಿ ನಿರ್ದೇಶನಾಲಯದ ಮಾಜಿ ಸಹಾಯಕ ನಿರ್ದೇಶಕ ಸೋಮಶೇಖರ್, ಎಲ್‌ಎಲ್‌ಎನ್ ಸಿಎನ್‌ಸಿಟಿ ಟೆಕ್‌ನ ನಿರ್ದೇಶಕ ಅಶೋಕ್, ವಾಫೆ ಎಂಜಿನಿಯರಿಂಗ್‌ನ ನಿರ್ದೇಶಕ ಎಂ.ಎ.ಕಾರ್ತಿಕ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಜಾಲಹಳ್ಳಿ ನಿವಾಸಿ ಸುಹಾಸ್ ಎಂಬುವರು ನೀಡಿದ ದೂರಿನ ಮೇರೆಗೆ ಪೀಣ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ADVERTISEMENT

ಸೋಮಶೇಖರ್ ಮತ್ತು ಅವರ ಪುತ್ರ ನಿರಂಜನ್ ಎಸ್. ಮಯೂರ್ ಅವರು ಕಂಪನಿಯ ಹಣ ಮತ್ತು ಆಸ್ತಿಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ನಾನು ಸಂಸ್ಥೆಯ ಮಾರ್ಕೆಟಿಂಗ್ ನಿರ್ದೇಶಕನಾಗಿದ್ದರೂ ಸಂಸ್ಥೆಯ ನಿಯಂತ್ರಣವು ಸಂಪೂರ್ಣವಾಗಿ ಸೋಮಶೇಖರ್ ಬಳಿಯೇ ಇತ್ತು. ಸೋಮಶೇಖರ್ ಅವರು ಆಗ ಸರ್ಕಾರಿ ಹುದ್ದೆಯಲ್ಲಿದ್ದ ಕಾರಣಕ್ಕೆ ನೇರವಾಗಿ ಪಾಲ್ಗೊಳ್ಳಲು ಸಾಧ್ಯವಾಗದೆ, ತಮ್ಮ ಪುತ್ರನ ಮೂಲಕ ಕೆಲಸ ಮಾಡಿಸುತ್ತಿದ್ದರು ಎಂದು ಸುಹಾಸ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

‘2021ರ ಡಿಸೆಂಬರ್‌ನಿಂದ 2023ರ ಡಿಸೆಂಬರ್‌ ವರೆಗೆ ವಾಫೆ ಎಂಜಿನಿಯರಿಂಗ್ ಸಂಸ್ಥೆಯಿಂದ ಅಶೋಕ ಅವರ ಎಲ್‌ಎಲ್‌ಎನ್ ಸಿಎನ್‌ಸಿಟಿ ಟೆಕ್‌ಗೆ ಯಂತ್ರಗಳ ಖರೀದಿ, ಏರೊಸ್ಪೇಸ್ ಉತ್ಪಾದನೆಗಾಗಿ ₹2.15 ಕೋಟಿ ವರ್ಗಾವಣೆ ಮಾಡಿದೆ. ಆದರೆ, ಖರೀದಿಗೆ ಆದೇಶ ಸಲ್ಲಿಸಲಾದ ಉಪಕರಣಗಳು ಮಾತ್ರ ಕಂಪನಿಗೆ ತಲುಪಿಲ್ಲ. ಬದಲಿಗೆ, ಆ ಹಣವನ್ನು ಸಂಸ್ಥೆ ಹೆಸರಿನಲ್ಲಿ ದುರುಪಯೋಗ ಪಡಿಸಿಕೊಳ್ಳಲಾಗಿದೆ. ಅದನ್ನು ಪ್ರಶ್ನಿಸಿದಾಗ ನನಗೆ ಬೆದರಿಕೆ ಹಾಕಿ ಹಲವಾರು ಚೆಕ್‌ಗಳಿಗೆ ಸಹಿ ಮಾಡಿಸಿಕೊಂಡಿದ್ದಾರೆ’ ಎಂದು ಸುಹಾಸ್‌ ದೂರಿದ್ದಾರೆ.

ಬೇನಾಮಿ ಹೆಸರಿನಲ್ಲಿ ಕಂಪನಿ ಸ್ಥಾಪಿಸಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ವಾಫೆ ಎಂಜಿನಿಯರಿಂಗ್ ಸಂಸ್ಥೆಗೆ ₹80 ಲಕ್ಷ ನಷ್ಟವಾಗಿದೆ. ಆದ್ದರಿಂದ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸುಹಾಸ್ ದೂರಿನಲ್ಲಿ ಕೋರಿದ್ದಾರೆ.

‘ಸೋಮಶೇಖರ್ ಅವರು ಇ.ಡಿಯ ಮಾಜಿ ಸಹಾಯಕ ನಿರ್ದೇಶಕರೇ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.