ADVERTISEMENT

ಮೇಲ್ವಿಚಾರಕನ ಕೊಂದು ಠಾಣೆಗೆ ಮೃತದೇಹ ತಂದರು !

ಅಕ್ಕನ ಜೊತೆ ಸಲುಗೆ ಬೆಳೆಸುತ್ತಿದ್ದಕ್ಕೆ ಕೊಲೆ; ಪೊಲೀಸರಿಗೆ ಶರಣಾದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 17:57 IST
Last Updated 17 ಅಕ್ಟೋಬರ್ 2021, 17:57 IST
ಕೊಲೆಯಾದ ಭಾಸ್ಕರ್
ಕೊಲೆಯಾದ ಭಾಸ್ಕರ್   

ಬೆಂಗಳೂರು: ಗಾರ್ಮೆಂಟ್ಸ್ ಕಾರ್ಖಾನೆಯೊಂದರ ಮೇಲ್ವಿಚಾರಕ ಭಾಸ್ಕರ್ (24) ಎಂಬುವರನ್ನು ಕೊಲೆ ಮಾಡಿರುವ ನಾಲ್ವರು ಆರೋಪಿಗಳು, ಮೃತದೇಹವನ್ನು ಆಟೊದಲ್ಲಿ ತಂದು ಪೊಲೀಸರಿಗೆ ಒಪ್ಪಿಸಿ ಶರಣಾಗಿದ್ದಾರೆ.

‘ಭಾಸ್ಕರ್ ಅವರನ್ನು ಶನಿವಾರ ರಾತ್ರಿ ಅಪಹರಿಸಿ ಕೊಲೆ ಮಾಡಲಾಗಿದೆ. ಆರೋಪಿಗಳಾದ ಮುನಿರಾಜು (28), ಮಾರುತಿ (22), ನಾಗೇಶ್ (22) ಹಾಗೂ ಪ್ರಶಾಂತ್ (20) ಎಂಬುವರು ಠಾಣೆಗೆ ಬಂದು ಶರಣಾಗಿದ್ದು, ಅವರೆಲ್ಲರನ್ನೂ ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಆರೋಪಿ ಮುನಿರಾಜುವಿನ ಅಕ್ಕನನ್ನು ಬೇರೆ ಊರಿಗೆ ಮದುವೆ ಮಾಡಿಕೊಡಲಾಗಿತ್ತು. ಪತಿ ತೊರೆದಿದ್ದ ಅಕ್ಕ, ಇಬ್ಬರು ಮಕ್ಕಳ ಸಮೇತ ನಗರಕ್ಕೆ ಬಂದು ಚಂದ್ರಶೇಖರ್ ಬಡಾವಣೆಯಲ್ಲಿ ವಾಸವಿದ್ದರು. ಅವರ ಸ್ನೇಹ ಬೆಳೆಸಿದ್ದ ಭಾಸ್ಕರ್, ಸಲುಗೆಯಿಂದ ಇರಲು ಪ್ರಯತ್ನಿಸುತ್ತಿದ್ದ.’

ADVERTISEMENT

‘ಮಹಿಳೆಯ ಮನೆಗೆ ಶನಿವಾರ ರಾತ್ರಿ ಬಂದಿದ್ದ ಭಾಸ್ಕರ್, ‘ನಿನಗೆ ಹಾಗೂ ನಿನ್ನ ಮಕ್ಕಳಿಗೆ ಹೊಸ ಮನೆ ಮಾಡಿಕೊಡುತ್ತೇನೆ. ನನ್ನ ಜೊತೆ ಬಾ’ ಎಂದಿದ್ದರು. ಅದಕ್ಕೆ ಒಪ್ಪಿದ್ದ ಮಹಿಳೆ, ಭಾಸ್ಕರ್ ಜೊತೆ ಆಟೊದಲ್ಲಿ ಹೊರಟಿದ್ದರು. ವಿರೋಧ ವ್ಯಕ್ತಪಡಿಸಿದ್ದ ಮಹಿಳೆಯ ಹಿರಿಯ ಮಗ, ಆಟೊದಿಂದ ಇಳಿದು ಓಡಿಹೋಗಿದ್ದ. ಆರೋಪಿ ಮುನಿರಾಜುವಿಗೆ ವಿಷಯ ತಿಳಿಸಿದ್ದ’ ಎಂದೂ ಅಧಿಕಾರಿ ತಿಳಿಸಿದರು.

‘ಕೋಪಗೊಂಡ ಮುನಿರಾಜು, ಇತರೆ ಆರೋಪಿಗಳ ಜೊತೆ ಆಟೊದಲ್ಲಿ ಸುಂಕದಕಟ್ಟೆ ಬಳಿ ಬಂದಿದ್ದ. ಭಾಸ್ಕರ್ ಹಾಗೂ ಅಕ್ಕ ಇದ್ದ ಆಟೊ ಅಡ್ಡಗಟ್ಟಿದ್ದ. ಇಬ್ಬರನ್ನೂ ತನ್ನ ಮನೆಗೆ ಕರೆದೊಯ್ದಿದ್ದ. ಬಳಿಕ ಸಹೋದರರು ಅಕ್ಕನನ್ನು ಮನೆಯಲ್ಲಿ ಬಿಟ್ಟು ಭಾಸ್ಕರ್‌ ಅವರನ್ನು ಮಾತ್ರ ಆಟೊದಲ್ಲಿ ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ಮಾಡಿದ್ದರು.’

‘ತಲೆಗೆ ಪೆಟ್ಟು ಬಿದ್ದು ಭಾಸ್ಕರ್‌ ಪ್ರಜ್ಞೆ ತಪ್ಪಿದ್ದರು. ನಾಟಕವಾಡುತ್ತಿರುವುದಾಗಿ ತಿಳಿದು ಆರೋಪಿಗಳು, ಅವರನ್ನು ಆಟೊದಲ್ಲಿ ಮನೆಯತ್ತ ಕರೆದುಕೊಂಡು ಹೊರಟಿದ್ದರು. ಉಸಿರಾಟ ಗಮನಿಸಿದಾಗ, ಮಾರ್ಗಮಧ್ಯೆಯೇ ಅವರು ಮೃತಪಟ್ಟ ಸಂಗತಿ ಗೊತ್ತಾಗಿತ್ತು’ ಎಂದೂ ಅಧಿಕಾರಿ ಹೇಳಿದರು.

ಠಾಣೆ ಬಳಿ ಆಟೊ: ‘ಗಾಬರಿಗೊಂಡ ಆರೋಪಿಗಳು, ಭಾಸ್ಕರ್‌ ಮೃತದೇಹವನ್ನು ಆಟೊದಲ್ಲಿ ಅನ್ನಪೂರ್ಣೇಶ್ವರಿನಗರ ಠಾಣೆ ಬಳಿ ಶನಿವಾರ ತಡರಾತ್ರಿ ತಂದಿದ್ದರು. ಠಾಣೆ ಸಿಬ್ಬಂದಿಗೆ ವಿಷಯ ತಿಳಿಸಿ, ನಾಲ್ವರೂ ಶರಣಾದರು. ನಂತರ, ಆಟೊದಲ್ಲಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು’ ಎಂದೂ ಅಧಿಕಾರಿ ತಿಳಿಸಿದರು.

‘ಅಕ್ಕನ ಜೊತೆ ಭಾಸ್ಕರ್ ಸಲುಗೆ ಬೆಳೆಸುತ್ತಿದ್ದಾನೆಂದು ತಿಳಿದು ಆರೋಪಿ ಮುನಿರಾಜು ಈ ಕೊಲೆ ಮಾಡಿದ್ದಾನೆ. ಆತ ಹಾಗೂ ಸಹಚರರ ಹೇಳಿಕೆ ಪಡೆಯಲಾಗಿದ್ದು, ತನಿಖೆ ಮುಂದುವರಿಸಲಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.