ADVERTISEMENT

ಅನಿಲ ಸೋರಿಕೆ:ನಿದ್ದೆಯಲ್ಲೇ ಬಾಲಕ ಸಾವು

ತಾಯಿ ಕೆಲಸಕ್ಕೆ ಹೋಗಿದ್ದಾಗ ದುರಂತ l ಇನ್ನೊಂದು ಮಗುವೂ ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2019, 19:56 IST
Last Updated 8 ಮಾರ್ಚ್ 2019, 19:56 IST
ತಾಯಿ–ಮಕ್ಕಳು ನೆಲೆಸಿದ್ದ ಮನೆ
ತಾಯಿ–ಮಕ್ಕಳು ನೆಲೆಸಿದ್ದ ಮನೆ   

ಬೆಂಗಳೂರು: ಪತಿಯನ್ನು ಕಳೆದುಕೊಂಡು ಪುಟ್ಟ ಮಕ್ಕಳೊಂದಿಗೆ ನಗರಕ್ಕೆ ಬಂದಿದ್ದ ನೇಪಾಳದ ಆ ಮಹಿಳೆ, ಎಚ್‌ಎಎಲ್ ಸಮೀಪದ ಸಣ್ಣ ಮನೆಯೊಂದರಲ್ಲಿ ನೆಲೆಸಿದ್ದರು. ನಸುಕಿನಲ್ಲೇ ಎದ್ದು ಮನೆಗೆಲಸಕ್ಕೆ ಹೋಗಿದ್ದ ಅವರು, ವಾಪಸ್ ಬರುವಷ್ಟರಲ್ಲಿ ದೊಡ್ಡ ದುರಂತವೇ ಸಂಭವಿಸಿತ್ತು. ಅಡುಗೆ ಅನಿಲ ಸೋರಿಕೆಯಾಗಿ ಹಿರಿಯ ಮಗ ಮಲಗಿದ್ದಲ್ಲೇ ಜೀವ ತೆತ್ತಿದ್ದರೆ, ಕಿರಿಯ ಕಂದಮ್ಮ ಅಣ್ಣನ ಶವದ ಮಗ್ಗುಲಲ್ಲೇ ಒದ್ದಾಡುತ್ತಿತ್ತು...

ಇಂತಹದ್ದೊಂದು ದಾರುಣ ಘಟನೆ ನಡೆದಿರುವುದು ಎಚ್‌ಎಎಲ್ ಬಳಿಯ ಜ್ಯೋತಿನಗರದಲ್ಲಿ. ಉಸಿರಾಟದ ತೊಂದರೆಯಿಂದ ಸಮೀರ್ (13) ಕೊನೆಯುಸಿರೆಳೆದಿದ್ದರೆ, ಆತನ ತಮ್ಮ ಶಶೀರ್ (5) ಅಸ್ವಸ್ಥಗೊಂಡು ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಜ್ಯೋತಿನಗರದಲ್ಲಿ ವ್ಯಕ್ತಿಯೊಬ್ಬರು 5X8 ಅಡಿ ವಿಸ್ತೀರ್ಣದ 20 ಪುಟ್ಟ ಮನೆಗಳನ್ನು ಕಟ್ಟಿ ವಠಾರ ನಿರ್ಮಿಸಿದ್ದಾರೆ. ಅಲ್ಲಿ ನೇಪಾಳದ ಕುಟುಂಬಗಳೇ ನೆಲೆಸಿವೆ. ಅಂತೆಯೇ ಕಟ್ಟಡದ ಮೆಟ್ಟಿಲ ಕೆಳಗಿದ್ದ ಮನೆಯಲ್ಲಿ ಈ ಮಕ್ಕಳು ತಾಯಿ ಕಲ್ಪನಾ ಜತೆ ಇದ್ದರು. ಸಮೀರ್ ಸಮೀಪದ ಶಾಲೆಯಲ್ಲೇ 5ನೇ ತರಗತಿ ಓದುತ್ತಿದ್ದರೆ, ಶಶೀರ್ 1ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ.

ADVERTISEMENT

ಆ ಮನೆಗೆ ಒಂದೇ ಒಂದು ಕಿಟಕಿ ಇಲ್ಲ. ಇದ್ದ ಸ್ವಲ್ಪ ಜಾಗದಲ್ಲೇ ಬೀರು, ಹಾಸಿಗೆ, ಪಾತ್ರೆ, ಸಿಲಿಂಡರ್, ಸ್ಟೌಗಳನ್ನು ಜೋಡಿಸಿಕೊಂಡಿದ್ದಾರೆ. ಅವುಗಳ ನಡುವೆಯೇ ಮುದುರಿಕೊಂಡು ಮಲಗುವ ಸ್ಥಿತಿ ತಾಯಿ–ಮಕ್ಕಳದ್ದು. ಎಂದಿ
ನಂತೆ ಶುಕ್ರವಾರ ನಸುಕಿನಲ್ಲೇ (5.15ಕ್ಕೆ) ಕಲ್ಪನಾ ಮನೆಗೆಲಸಕ್ಕೆ ಹೋಗಿದ್ದರು. ಈ ವೇಳೆ ಸಮೀರ್ ಕೂಡ ಎದ್ದು, ಒಳಗಿ
ನಿಂದ ಚಿಲಕ ಹಾಕಿ ನಿದ್ರೆಗೆ ಜಾರಿದ್ದ.

ಆ ನಂತರ ಅಡುಗೆ ಅನಿಲ ಸೋರಿಕೆಯಾಗಿ ಇಡೀ ಕೋಣೆಯನ್ನು ಆವರಿಸಿಕೊಂಡಿದೆ. ಮಕ್ಕಳಿಬ್ಬರೂ ಗಾಢ ನಿದ್ರೆಯಲ್ಲಿದ್ದ ಕಾರಣ ಅದರ ವಾಸನೆ ಅವರಿಗೆ ಗೊತ್ತೇ ಆಗಿಲ್ಲ. ಮಲಗಿದ್ದಲ್ಲೇ ಸಮೀರ್ ಪ್ರಾಣ ಬಿಟ್ಟಿದ್ದಾನೆ. ಶಶೀರ್ ಹೊದಿಕೆಯನ್ನು ಪೂರ್ತಿ ಹೊದ್ದಿದ್ದರಿಂದ ಹೆಚ್ಚು ಪ್ರಮಾಣದ ಅನಿಲ ಆತನ ದೇಹ ಸೇರಿಲ್ಲ ಎಂದು ಪೊಲೀಸರು ಹೇಳಿದರು.

ಕೆಲಸ ಮುಗಿಸಿಕೊಂಡು 7.30ಕ್ಕೆ ಕಲ್ಪನಾ ವಠಾರಕ್ಕೆ ಬಂ‌ದಾಗ ಅನಿಲದ ವಾಸನೆ ಮೂಗಿಗೆ ಬಡಿದಿದೆ. ಕೂಡಲೇ, ‘ಯಾರದ್ದೋ ಮನೆಯಲ್ಲಿ ಗ್ಯಾಸ್ ಲೀಕ್ ಆಗಿದೆ. ವಾಸನೆ ಬರುತ್ತಿದೆ’ ಎಂದು ಕೂಗುತ್ತ ಅಕ್ಕ–ಪಕ್ಕದ ಮನೆಯವರನ್ನೆಲ್ಲ ಅವರೇ ಎಚ್ಚರಿಸಿದ್ದಾರೆ.

ಕೊನೆಗೆ ತಮ್ಮ ಮನೆಯತ್ತ ಬಂದು ಎಷ್ಟೇ ಬಾಗಿಲು ಬಡಿದರೂ ಮಕ್ಕಳಿಂದ ಪ್ರತಿಕ್ರಿಯೆ ಬಂದಿಲ್ಲ. ಸ್ಥಳೀಯರ ನೆರವಿನಿಂದ ಬಾಗಿಲು ಮುರಿದು ನೋಡಿದಾಗ ಒಬ್ಬ ಮಗ ಒದ್ದಾಡುತ್ತಿದ್ದರೆ, ಇನ್ನೊಬ್ಬ ಪ್ರಜ್ಞೆಯೇ ಇಲ್ಲದೇ ಮಲಗಿದ್ದ.

ತಕ್ಷಣ ಇಬ್ಬರನ್ನೂ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಸಮೀರ್ ಮೃತಪಟ್ಟಿರುವುದಾಗಿ ಹೇಳಿದ ವೈದ್ಯರು, ಶಶೀರ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಸೇಂಟ್ ಜಾನ್ಸ್‌ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅದೃಷ್ಟವಷಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ತುಂಬ ಕಷ್ಟದಿಂದ ಬಂದವಳು’

‘ಅಕ್ಕ ಸ್ವಾವಲಂಬಿ ಹಾಗೂ ಶ್ರಮ ಜೀವಿ. ಪತಿಯನ್ನು ಕಳೆದುಕೊಂಡ ನಂತರ ಗಂಡನ ಮನೆಯಲ್ಲಿ ತುಂಬ ತೊಂದರೆ ಅನುಭವಿಸಿದ್ದಳು. ಅತ್ತೆ–ಮಾವ ಮನೆಯಿಂದ ಹೊರಹಾಕಿದ ನಂತರ ಕೆಲ ಕಾಲ ನೇಪಾಳದಲ್ಲೇ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಳು. ಕೊನೆಗೆ ಯಾರ ಸಹವಾಸವೂ ಬೇಡವೆಂದು ಇಲ್ಲಿಗೆ ಬಂದಿದ್ದಳು’ ಎಂದು ಕಲ್ಪನಾ ತಮ್ಮ ರಾಕೇಶ್ ಹೇಳಿದರು.

‘ಮಕ್ಕಳನ್ನು ಶಾಲೆಗೆ ಕಳುಹಿಸಬೇಕೆಂದು ಪ್ರತಿದಿನ ಆಕೆ ಬೆಳಿಗ್ಗೆ 7.30ಕ್ಕೇ ಕೆಲಸದಿಂದ ವಾಪಸ್ ಬರುತ್ತಿದ್ದಳು. ಅವರನ್ನು ಶಾಲೆಗೆ ಬಿಟ್ಟು ನಂತರ ಮತ್ತೆ ಮನೆಗೆಲಸಕ್ಕೆ ಹೋಗುತ್ತಿದ್ದಳು. ನಾನೂ ಇದೇ ವಠಾರದಲ್ಲಿ ನೆಲೆಸಿದ್ದೇನೆ. ದುರದೃಷ್ಟವೆಂದರೆ ಬೆಳಿಗ್ಗೆಯೇ ನಾನೂ ಕೆಲಸದ ನಿಮಿತ್ತ ಹೊರಗೆ ಹೋಗಿದ್ದೆ’ ಎನ್ನುತ್ತ ದುಃಖತಪ್ತರಾದರು.

ಹಿಂದಿನ ದಿನವಷ್ಟೇ ಗ್ಯಾಸ್ ತುಂಬಿದ್ದ

‘ಕಲ್ಪನಾ ಅವರು ಗುರುವಾರವಷ್ಟೇ ಜಿ.ಎಂ.ಪಾಳ್ಯದ ಫಕ್ರುದ್ದೀನ್ ಎಂಬಾತನ ಬಳಿ ಸಿಲಿಂಡರ್‌ಗೆ ಅನಿಲ ತುಂಬಿಸಿದ್ದರು. ಆ ನಂತರ ಆತನೇ ಮನೆಗೆ ಬಂದು ಸ್ಟೌಗೆ ಸಂಪರ್ಕ ಕಲ್ಪಿಸಿ ಹೋಗಿದ್ದ. ಈ ಹಂತದಲ್ಲೇ ಏನೋ ಸಮಸ್ಯೆಯಾಗಿದೆ. ಹೀಗಾಗಿ, ನಿರ್ಲಕ್ಷ್ಯದ ಸಾವು (ಐಪಿಸಿ 304ಎ) ಆರೋಪದಡಿ ಪ್ರಕರಣ ದಾಖಲಿಸಿಕೊಂಡು, ಫಕ್ರುದ್ದೀನ್‌ನನ್ನು ವಶಕ್ಕೆ ಪಡೆದಿದ್ದೇವೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.