ADVERTISEMENT

ಮಗಳಿಗೆ ಲೈಂಗಿಕ ಕಿರುಕುಳ ಕೊಟ್ಟ ಜಿಕೆವಿಕೆ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ!

ತನ್ನ ಸ್ವಂತ ಮಗಳಿಗೇ ಲೈಂಗಿಕ ದೌರ್ಜನ್ಯ ನೀಡುತ್ತಿದ್ದ ತಂದೆ‍; ಆರೋಪ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2021, 4:13 IST
Last Updated 23 ನವೆಂಬರ್ 2021, 4:13 IST
ಕೊಲೆಯಾದ ದೀಪಕ್‌ ಕುಮಾರ್
ಕೊಲೆಯಾದ ದೀಪಕ್‌ ಕುಮಾರ್   

ಬೆಂಗಳೂರು: ಕೃಷಿ ವಿಶ್ವವಿದ್ಯಾಲಯ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಭದ್ರತಾ ಸಿಬ್ಬಂದಿ ದೀಪಕ್‌ ಕುಮಾರ್ (46) ಎಂಬುವರನ್ನು ಅವರ ಮನೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು, ಮಗಳ ಸ್ನೇಹಿತನೇ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ.

‘ಬಿಹಾರದ ದೀಪಕ್‌ಕುಮಾರ್, ಜಿಕೆವಿಕೆಯಲ್ಲಿ ಭದ್ರತಾ ಸಿಬ್ಬಂದಿ ಆಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ಜತೆ ವೀರ್‌ಸಾಗರ್‌ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪತ್ನಿ ಕೆಲಸ ನಿಮಿತ್ತ ತಮ್ಮೂರಾದ ಬಿಹಾರಕ್ಕೆ ಇತ್ತೀಚೆಗೆ ಹೋಗಿದ್ದರು. ದೀಪಕ್‌ಕುಮಾರ್ ಹಾಗೂ ಮಕ್ಕಳು ಮಾತ್ರ ಮನೆಯಲ್ಲಿದ್ದರು. ಭಾನುವಾರ ತಡರಾತ್ರಿ ಮಾರಕಾಸ್ತ್ರ ಹಿಡಿದು ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು, ದೀಪಕ್‌ಕುಮಾರ್ ಮೇಲೆ ದಾಳಿ ಮಾಡಿದ್ದರು. ಮಕ್ಕಳ ಎದುರೇ ಅವರನ್ನು ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಹೊಡೆದಿದ್ದರು.’

ADVERTISEMENT

‘ತಲೆ ಹಾಗೂ ದೇಹದ ಹಲವು ಭಾಗದಲ್ಲಿ ತೀವ್ರ ಗಾಯವಾಗಿತ್ತು. ವಿಪರೀತ ರಕ್ತಸ್ರಾವದಿಂದ ಸ್ಥಳದಲ್ಲೇ ದೀಪಕ್‌ಕುಮಾರ್ ಮೃತಪಟ್ಟಿದ್ದಾರೆ. ಕೃತ್ಯದ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಯಲಹಂಕ ನ್ಯೂ ಟೌನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಬ್ಬ ಆರೋಪಿಯ ಸುಳಿವು ಸಿಕ್ಕಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಗಳ ಮೇಲೆ ಲೈಂಗಿಕ ದೌರ್ಜನ್ಯ?

‘ಕೊಲೆಯಾದ ದೀಪಕ್‌ಕುಮಾರ್‌ ಅವರಿಗೆ ಇಬ್ಬರು ಪತ್ನಿಯರು. ಒಬ್ಬರು ಬಿಹಾರದಲ್ಲಿದ್ದಾರೆ. ಇನ್ನೊಬ್ಬ ಪತ್ನಿ, ಬೆಂಗಳೂರಿನಲ್ಲೇ ಜೊತೆಯಲ್ಲಿದ್ದರು. ಅವರು ಸಹ ಇತ್ತೀಚೆಗೆ ಊರಿಗೆ ಹೋಗಿದ್ದರು. ಹೀಗಾಗಿ, ಇಬ್ಬರು ಹೆಣ್ಣು ಮಕ್ಕಳು ಮಾತ್ರ ಮನೆಯಲ್ಲಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಹಿರಿಯ ಮಗಳ ಮೇಲೆ ದೀಪಕ್‌ಕುಮಾರ್ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರೆಂಬ ಆರೋಪವಿದೆ. ದೌರ್ಜನ್ಯದಿಂದ ಬೇಸತ್ತ ಮಗಳು, ಕಾಲೇಜು ಸ್ನೇಹಿತನಿಗೆ ವಿಷಯ ತಿಳಿಸಿದ್ದರು. ಅದೇ ಸ್ನೇಹಿತ, ಸಹಚರರ ಜೊತೆ ಸೇರಿ ಕೃತ್ಯ ಎಸಗಿರುವ ಮಾಹಿತಿ ಇದೆ’ ಎಂದೂ ತಿಳಿಸಿವೆ.

‘ದೀಪಕ್‌ಕುಮಾರ್,ಭಾನುವಾರ ತಡರಾತ್ರಿಯೂ ಮಗಳ ಜೊತೆ ಅನುಚಿತವಾಗಿ ವರ್ತಿಸಿದ್ದರೆಂದು ಹೇಳಲಾಗಿದೆ. ಅದೇ ವಿಷಯವನ್ನು ಮಗಳು, ಸ್ನೇಹಿತನಿಗೆ ಕರೆ ಮಾಡಿ ತಿಳಿಸಿದ್ದರು. ಮಾರಕಾಸ್ತ್ರ ಸಮೇತ ಬೈಕ್‌ನಲ್ಲಿ ಸ್ಥಳಕ್ಕೆ ಬಂದಿದ್ದ ಸ್ನೇಹಿತ ಹಾಗೂ ಇತರರು, ಮನೆಗೆ ನುಗ್ಗಿ ದೀಪಕ್‌ಕುಮಾರ್‌ ಅವರನ್ನು ಕೊಂದಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.