ADVERTISEMENT

ವಾರದೊಳಗೆ 100 ‘ನಮ್ಮ ಕ್ಲಿನಿಕ್‌’ ಆರಂಭ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 16:20 IST
Last Updated 7 ಮಾರ್ಚ್ 2023, 16:20 IST
ಜಯನಗರದ ಕೆಎಸ್‌ಆರ್‌ಟಿಸಿ ಆಸ್ಪತ್ರೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ‘ನಮೋ ಡಯಾಲಿಸಿಸ್‌ ಕೇಂದ್ರ’ ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ, ಕಂದಾಯ ಸಚಿವ ಆರ್‌. ಅಶೋಕ ಇದ್ದರು– ಪ್ರಜಾವಾಣಿ ಚಿತ್ರ
ಜಯನಗರದ ಕೆಎಸ್‌ಆರ್‌ಟಿಸಿ ಆಸ್ಪತ್ರೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ‘ನಮೋ ಡಯಾಲಿಸಿಸ್‌ ಕೇಂದ್ರ’ ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ, ಕಂದಾಯ ಸಚಿವ ಆರ್‌. ಅಶೋಕ ಇದ್ದರು– ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 100 ‘ನಮ್ಮ ಕ್ಲಿನಿಕ್‌’ಗಳನ್ನು ಆರಂಭಿಸಲಾಗಿದೆ. ವಾರದೊಳಗೆ ಇನ್ನೂ 100 ನಮ್ಮ ಕ್ಲಿನಿಕ್‌ಗಳು ಆರಂಭವಾಗಲಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಜಯನಗರದ ಕೆಎಸ್‌ಆರ್‌ಟಿಸಿ ಆಸ್ಪತ್ರೆಯಲ್ಲಿ ಮಂಗಳವಾರ ನಡೆದ ‘ಜನೌಷಧಿ ದಿನ ಆಚರಣೆ–2023’ ಕಾರ್ಯಕ್ರಮದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವಾಲಯದಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆರಂಭಿಸಿರುವ 100 ನೇ ಜನೌಷಧಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಚಾರಿ ಆಸ್ಪತ್ರೆ ಹಾಗೂ ‘ನಮೋ ಡಯಾಲಿಸಿಸ್‌ ಕೇಂದ್ರ’ಗಳನ್ನೂ ಅವರು ಉದ್ಘಾಟಿಸಿದರು.

‘ನಮ್ಮ ಸರ್ಕಾರವು ಬೆಂಗಳೂರಿನ ಜನರ ಆರೋಗ್ಯ ರಕ್ಷಣೆಗೆ ವಿಶೇಷ ವ್ಯವಸ್ಥೆ ಕಲ್ಪಿಸುತ್ತಿದೆ. 240 ವಾರ್ಡ್‌ಗಳಲ್ಲೂ ನಮ್ಮ ಕ್ಲಿನಿಕ್‌ಗಳನ್ನು ಆರಂಭಿಸಲಾಗುವುದು. 19 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ನಾಲ್ಕು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತಿದೆ’ ಎಂದರು.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು ಬಡವರ ಕುರಿತು ಅವರು ಹೊಂದಿರುವ ಕಾಳಜಿಯ ಫಲವಾಗಿ ಜನೌಷಧಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಸ್ವತಃ ಬಡತನದ ನೋವನ್ನು ಅನುಭವಿಸಿದ್ದ ಪ್ರಧಾನಿ, ಬಡವರು ಔಷಧಿ ಖರೀದಿಸಲು ಕಷ್ಟವಾಗಬಾರದು ಎಂಬ ಕಾರಣಕ್ಕಾಗಿ ಈ ಯೋಜನೆ ಜಾರಿಗೊಳಿಸಿದ್ದಾರೆ. ಇಂತಹ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ತಲುಪಬೇಕು ಎಂದು ಹೇಳಿದರು.

ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಮಾತನಾಡಿ, ‘ಜನರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಪೂರೈಸುವ ಉದ್ದೇಶದಿಂದ ಜನೌಷಧಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಈಗ ದೇಶದಲ್ಲಿ ಸುಮಾರು 9,000 ಜನೌಷಧಿ ಕೇಂದ್ರಗಳಲ್ಲಿ ಕೈಗೆಟಕುವ ದರದಲ್ಲಿ ಔಷಧಿಗಳ ಮಾರಾಟ ನಡೆಯುತ್ತಿದೆ’ ಎಂದರು.

ಸರ್ಕಾರೇತರ ಸಂಸ್ಥೆಗಳು ಜನೌಷಧಿ ಕೇಂದ್ರಗಳ ನಿರ್ವಹಣೆಯಲ್ಲಿ ಕೈಜೋಡಿಸುತ್ತಿವೆ. ಈ ಕೇಂದ್ರಗಳ ನಿರ್ವಹಣೆಯನ್ನು ಸುಲಭವಾಗಿ ಮಾಡಬಹುದು. ಕೇಂದ್ರ ತೆರೆಯುವವರಿಗೆ ಮಾರಾಟದ ಮೊತ್ತದಲ್ಲಿ ಶೇಕಡ 20ರಷ್ಟು ಕಮಿಷನ್‌ ದೊರೆಯುತ್ತದೆ ಎಂದು ಹೇಳಿದರು. ಕಂದಾಯ ಸಚಿವ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.