ADVERTISEMENT

‘ನನಗೆ ಸಂಕಟ ತರಲು ಯಾರಿಂದಲೂ ಸಾಧ್ಯವಿಲ್ಲ’

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 20:14 IST
Last Updated 4 ಸೆಪ್ಟೆಂಬರ್ 2019, 20:14 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು: ‘ಡಿ.ಕೆ.ಶಿವಕುಮಾರ್‌ ಜೈಲಿಗೆ ಹೋದರು, ಇನ್ನು ಕುಮಾರಸ್ವಾಮಿ ಸರದಿ ಎಂಬುದಾಗಿ ಮಾಧ್ಯಮ ಹೇಳಿಕೆಗಳು ಪ್ರಕಟವಾಗುತ್ತಿವೆ. ಆದರೆ ನನಗೆ ಸಂಕಟ ತರಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಹುಣಸೂರು ಕ್ಷೇತ್ರದ ಉಪಚುನಾವಣೆ ಸಂಬಂಧ ಬುಧವಾರ ಇಲ್ಲಿನ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದೇಶದಲ್ಲಿದ್ದಐಎಂಎ ಮುಖ್ಯಸ್ಥನನ್ನು ರಾಜ್ಯಕ್ಕೆ ಕರೆ ತಂದವರು ನಮ್ಮ ಪೊಲೀಸರು. ಆತನನ್ನು ಕೇಂದ್ರದ ತನಿಖಾ ಅಧಿಕಾರಿಗಳು 15 ದಿನ ತಮ್ಮ ಬಳಿ ಏಕೆ ಇಟ್ಟುಕೊಂಡರು ಎಂಬುದು ನನಗೆ ಗೊತ್ತಿದೆ. ಸೂಕ್ತ ಸಮಯದಲ್ಲಿ ಅದೆಲ್ಲವನ್ನೂ ಬಹಿರಂಗಪಡಿಸುವೆ’ ಎಂದರು.

‘ಡಿಕೆಶಿ, ನನ್ನ ಮೇಲೆ ಆರೋಪ ಇದ್ದರೆ ದೂರು ನೀಡಲಿ, ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರ ಕೈಯಲ್ಲಿ ಈಗ ಎಲ್ಲಾ ಅಧಿಕಾರವೂ ಇದೆಯಲ್ಲ?’ ಎಂದು ಸವಾಲು ಹಾಕಿದ ಅವರು, ಯಡಿಯೂರಪ್ಪ ಸರ್ಕಾರದಲ್ಲಿ ಒಬ್ಬನೇ ಒಬ್ಬ ಪ್ರಾಮಾಣಿಕ ಮಂತ್ರಿ ಇಲ್ಲ ಎಂದು ಟೀಕಿಸಿದರು.

ADVERTISEMENT

ಸತ್ತಿದ್ದರೇ?: ‘ಶಾಸಕರನ್ನು ಖರೀದಿಸಲು ರಾಜ್ಯದಲ್ಲಿ 2008ರಿಂದಲೂ ಬಿಜೆಪಿಯ ಪ್ರಯತ್ನ ನಡೆಯುತ್ತಲೇ ಇದೆ. ಕೋಟಿಗಟ್ಟಲೆ ಹಣ ವರ್ಗಾವಣೆ ಆಗಿದ್ದರೆ, ಇದು ಐಟಿ, ಇಡಿ ಅಧಿಕಾರಿಗಳಿಗೆ ಕಾಣಿಸಲಿಲ್ಲವೆ? ಅವರು ಸತ್ತಿದ್ದರೇ?’ ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು.

ಮಾಜಿ ಸಿವಿಸಿ ವಿಠ್ಠಲ್‌ ಅವರು ಭ್ರಷ್ಟಾಚಾರದ ಬಗ್ಗೆ ಒಂದು ಪುಸ್ತಕ ಬರೆದಿದ್ದಾರೆ. ಕೇಂದ್ರ ಸರ್ಕಾರ ತನಗಾದವರನ್ನು ಕೇಂದ್ರದ ಇಲಾಖೆಗಳನ್ನು ಬಳಸಿಕೊಂಡು ಹೇಗೆ ದೌರ್ಜನ್ಯ ಎಸಗುತ್ತಿದೆ ಎಂಬುದನ್ನು ಅವರು ವಿವರಿಸಿದ್ದಾರೆ. ಇಂದು ಅದೇ ಪರಿಸ್ಥಿತಿ ನೆಲೆಸಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.