ADVERTISEMENT

ರವೀಂದ್ರ ಸಚಿವರ ಕಾರ್ಯದರ್ಶಿ

ಪಾಲಿಕೆಗೆ ₹63 ಕೋಟಿ ನಷ್ಟ ಮಾಡಿದ್ದ ಆರೋಪ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 22:01 IST
Last Updated 13 ಮಾರ್ಚ್ 2020, 22:01 IST
ಜಿ.ಎಂ.ರವೀಂದ್ರ
ಜಿ.ಎಂ.ರವೀಂದ್ರ   

ಬೆಂಗಳೂರು: ಎಂಟು ವಾಣಿಜ್ಯ ಕಟ್ಟಡಗಳ ಆಸ್ತಿ ತೆರಿಗೆ ಕಡಿತ ಮಾಡಿ ಪಾಲಿಕೆಗೆ ₹63 ಕೋಟಿ ನಷ್ಟ ಉಂಟು ಮಾಡಿದ್ದ ಅಧಿಕಾರಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಿಸಿ ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.

ಸಹಕಾರ ಇಲಾಖೆಯ ಹೆಚ್ಚುವರಿ ನಿಬಂಧಕ ಜಿ.ಎಂ. ರವೀಂದ್ರ ಅವರನ್ನು ಜಿ.ಪಿ. ಹರ್ಷಭಾನು ಜಾಗಕ್ಕೆ ನೇಮಕ ಮಾಡಲಾಗಿದೆ.

ರವೀಂದ್ರ ಅವರು ಪಾಲಿಕೆಯ ಪೂರ್ವ ವಲಯದ ಜಂಟಿ ಆಯುಕ್ತರಾಗಿದ್ದ ಅವಧಿಯಲ್ಲಿ ಆಸ್ತಿ ತೆರಿಗೆ ಕಡಿತ ಮಾಡಿ ಪಾಲಿಕೆಗೆ ಭಾರಿ ನಷ್ಟ ಉಂಟು ಮಾಡಿದ್ದಾರೆ ಎಂದು ಪಾಲಿಕೆಯ ಹಿರಿಯ ಸದಸ್ಯ ಪದ್ಮನಾಭ ರೆಡ್ಡಿ ಆರೋಪಿಸಿದ್ದರು. ದೊಮ್ಮಲೂರು ಸಸ್‌ಕೆನ್‌ ಟೆಕ್ನಾಲಜಿ, ಅಶೋಕ ಹೋಟೆಲ್, ಎ.ಎಸ್.ಕೆ. ಬ್ರದರ್ಸ್‌, ರಾಯಲ್ ಟರ್ಜಿಡ್‌, ಒಬೆರಾಯ್ ಸಂಸ್ಥೆ, ಶ್ರೀರಾಮ್ ಲೀಲಾ ಡೆವಲಪರ್ಸ್‌, ಈಸ್ಟ್‌ವೆಸ್ಟ್‌ ಹೋಟೆಲ್ ಮತ್ತು ಎಲೇಕ್ಸೈರ್‌ ಎಂಟರ್‌ ಸಂಸ್ಥೆಗಳ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ನೀಡಿದ್ದರು. ಆ ಮೂಲಕ ಪಾಲಿಕೆ ಬೊಕ್ಕಸಕ್ಕೆ ₹63 ಕೋಟಿ ನಷ್ಟ ಉಂಟು ಮಾಡಿದ್ದರು.

ADVERTISEMENT

ಕಾನೂನುಬಾಹಿರವಾಗಿ ತೆರಿಗೆ ವಿನಾಯಿತಿ ನೀಡಿರುವ ಈ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಪಾಲಿಕೆ ಸದಸ್ಯರು ಕೌನ್ಸಿಲ್‌ ಸಭೆಯಲ್ಲಿ ಪಕ್ಷಾತೀತವಾಗಿ ಒತ್ತಡ ಹೇರಿದ್ದರು. ಈ ಅಕ್ರಮದ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ವರದಿ ಸಲ್ಲಿಸಿದ್ದರು.

ಇಲಾಖಾ ವಿಚಾರಣೆ ಬಾಕಿ ಇರಿಸಿ ಅಮಾನತುಗೊಳಿಸಲು ಬಿಬಿಎಂಪಿ ಹೆಚ್ಚುವರಿ ಆಯುಕ್ತರು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2019ರ ನವೆಂಬರ್‌ನಲ್ಲಿ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಎರವಲು ಸೇವೆಯನ್ನು ಮೊಟಕುಗೊಳಿಸಿ ಮೂಲ ಇಲಾಖೆಗೆ ನವೆಂಬರ್‌ನಲ್ಲಿ ವಾಪಸ್ ಕಳುಹಿಸಲಾಗಿತ್ತು.

ಏನು ಅಕ್ರಮ: ‘ಆಸ್ತಿ ತೆರಿಗೆ ನಿರ್ಧರಿಸುವ ಹಾಗೂ ಪರಿಷ್ಕರಣೆ ಮಾಡುವ ಸಮಯದಲ್ಲಿ ಕಟ್ಟಡದಲ್ಲಿ ರಚನಾತ್ಮಕ ಹಾಗೂ ಬಳಕೆಯಲ್ಲಿ ಬದಲಾವಣೆಗಳಿದ್ದರೆ ಇಂತಹ ಬದಲಾವಣೆ ದಿನಾಂಕದಿಂದ ಅಥವಾ ಸಂಪೂರ್ಣ ಬ್ಲಾಕ್‌ ಅವಧಿಗೆ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಬೇಕಾಗುತ್ತದೆ. ಪಾಲಿಕೆಯಲ್ಲಿ 2008–09ರಿಂದ 2015–16ನೇ ಸಾಲಿನ ವರೆಗೆ ಮೊದಲ ಬ್ಲಾಕ್ ಅವಧಿ ಹಾಗೂ 2016–17ನೇ ಸಾಲಿನಿಂದ ಎರಡನೇ ಬ್ಲಾಕ್‌ ಅವಧಿಯಾಗಿದೆ. ಪೂರ್ವ ವಲಯದಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆ ವೇಳೆ ಈ ಅಂಶಗಳನ್ನು ಅನುಸರಿಸಿಲ್ಲ. ಕಟ್ಟಡದಲ್ಲಿ ಯಾವುದೇ ರಚನಾತ್ಮಕ ಬದಲಾವಣೆಗಳಿಲ್ಲದಿದ್ದರೂ ಸಂಪೂರ್ಣ ಬ್ಲಾಕ್ ಅವಧಿಯನ್ನು ಪರಿಗಣಿಸಿ ಮದ್ಯದ ಆರ್ಥಿಕ ವರ್ಷದಿಂದ ಆಸ್ತಿ ತೆರಿಗೆ ನಿಗದಿಪಡಿಸಲಾಗಿದೆ. ಇದು ಕೆಎಂಸಿ ಕಾಯ್ದೆಯ ಉಲ್ಲಂಘನೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಬಗ್ಗೆಪ್ರತಿಕ್ರಿಯೆಗೆ ಜಿ.ಎಂ.ರವೀಂದ್ರ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.