ADVERTISEMENT

ಬೆಂಗಳೂರು: ಗುಡುಗು– ಸಿಡಿಲು ಸಹಿತ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 0:52 IST
Last Updated 4 ಜೂನ್ 2022, 0:52 IST
ನಗರದಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಯಿಂದಾಗಿ ರಸ್ತೆ ಮೇಲೆ ಹರಿದ ನೀರಿನಲ್ಲಿ ವಾಹನಗಳು ಸಂಚರಿಸಿದವು – ಪ್ರಜಾವಾಣಿ ಚಿತ್ರ
ನಗರದಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಯಿಂದಾಗಿ ರಸ್ತೆ ಮೇಲೆ ಹರಿದ ನೀರಿನಲ್ಲಿ ವಾಹನಗಳು ಸಂಚರಿಸಿದವು – ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ಹಲವು ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿ ಉತ್ತಮ ಮಳೆ ಸುರಿಯಿತು. ಗುಡುಗು– ಸಿಡಿಲಿನ ಅಬ್ಬರವೂ ಇತ್ತು. ಕೆಲವೆಡೆ, ರಸ್ತೆ ಮೇಲೆಯೇ ನೀರು ಹರಿಯಿತು.

ಬಹುತೇಕ ಕಡೆ ಬೆಳಿಗ್ಗೆಯಿಂದ ಬಿಸಿಲು ಇತ್ತು. ಮಧ್ಯಾಹ್ನದ ನಂತರ ಕೆಲವೆಡೆ ಮೋಡ ಕವಿದ ವಾತಾವರಣ ಕಂಡುಬಂತು. ರಾತ್ರಿ 8 ಗಂಟೆಯಿಂದ ಬಿಡುವು ನೀಡುತ್ತಲೇ ಜೋರು ಮಳೆ ಆಯಿತು.

ರಾಜರಾಜೇಶ್ವರಿನಗರ, ಕೆಂಗೇರಿ, ದೀಪಾಂಜಲಿನಗರ, ಚಾಮರಾಜಪೇಟೆ, ವಿಜಯನಗರ, ರಾಜಾಜಿನಗರ, ಬಸವೇಶ್ವರನಗರ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಪೀಣ್ಯ, ಲಗ್ಗೆರೆ, ನಂದಿನಿ ಲೇಔಟ್, ಮಲ್ಲೇಶ್ವರ, ಶೇಷಾದ್ರಿಪುರ, ಸಂಜಯನಗರ, ಹೆಬ್ಬಾಳ, ಆರ್‌.ಟಿ.ನಗರ, ನಾಗವಾರ, ಹೆಣ್ಣೂರು, ಬಾಣಸವಾಡಿ ಹಾಗೂ ಸುತ್ತಮುತ್ತ ಮಳೆ ಹೆಚ್ಚಿತ್ತು.

ADVERTISEMENT

ಸಂಪಂಗಿರಾಮನಗರ, ಗಾಂಧಿನಗರ, ಮೆಜೆಸ್ಟಿಕ್, ಶಿವಾಜಿನಗರ, ಎಂ.ಜಿ.ರಸ್ತೆ, ಕೋರಮಂಗಲ, ಮಡಿವಾಳ, ಲಾಲ್‌ಬಾಗ್, ವಿಲ್ಸನ್ ಗಾರ್ಡನ್, ಶಾಂತಿನಗರ, ಅಶೋಕನಗರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲೂ ಮಳೆ ಸುರಿಯಿತು.

ಶಿವಾನಂದ ವೃತ್ತ, ಮೆಜೆಸ್ಟಿಕ್ ರೈಲ್ವೆ ಕೆಳ ಸೇತುವೆ, ಓಕಳಿಪುರ, ಅರಮನೆ ರಸ್ತೆ ಹಾಗೂ ಇತರೆಡೆ ರಸ್ತೆ ಮೇಲೆಯೇ ನೀರು ಹರಿಯತು. ಅದರಲ್ಲೇ ವಾಹನಗಳು ಸಂಚರಿಸಿದವು. ಕೆಲ ದ್ವಿಚಕ್ರ ವಾಹನಗಳು ನೀರಿನಲ್ಲೇ ಕೆಟ್ಟು ನಿಂತಿದ್ದವು. ಸ್ಥಳೀಯರೇ ವಾಹನಗಳನ್ನು ತಳ್ಳಿ ಸುರಕ್ಷಿತ ಸ್ಥಳ ತಲುಪಿಸಿದರು.

ಚಿಕ್ಕಪೇಟೆ, ಬಿವಿಕೆ ಅಯ್ಯಂಗಾರ್ ರಸ್ತೆ, ಕೆಂಪೇಗೌಡ ರಸ್ತೆ ಸೇರಿ ಹಲವು ಪ್ರದೇಶಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಅಲ್ಲೆಲ್ಲ ರಸ್ತೆ ಅಗೆದಿದ್ದರಿಂದ ಗುಂಡಿಗಳು ಬಿದ್ದಿವೆ. ಶುಕ್ರವಾರ ರಾತ್ರಿ ಸುರಿದ ನೀರು ಗುಂಡಿಯಲ್ಲಿ ನಿಂತುಕೊಂಡಿತ್ತು. ಅದೇ ನೀರು ರಸ್ತೆಗೆ ಹರಿದು ಪಾದಚಾರಿಗಳ ಓಡಾಟಕ್ಕೆ ತೊಂದರೆ
ಆಯಿತು.

‘ಮಳೆಗಾಲ ಆರಂಭವಾಗುತ್ತಿದೆ. ಬಿಡುವು ಕೊಡುತ್ತಲೇ ಕೆಲದಿನಗಳಿಂದ ನಗರದಲ್ಲಿ ಉತ್ತಮ ಮಳೆ ಆಗುತ್ತಿದೆ. ಕೆಲವೆಡೆ ರಸ್ತೆ ಮೇಲೆಯೇ ನೀರು ಹರಿಯುತ್ತಿತ್ತು. ದೂರುಗಳು ಬರುತ್ತಿದ್ದಂತೆ ಸಿಬ್ಬಂದಿ ಸ್ಥಳಕ್ಕೆ ಹೋಗಿ ಸಮಸ್ಯೆ ಬಗೆಹರಿಸಿದ್ದಾರೆ. ಉಳಿದಂತೆ ಹಾನಿ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ
ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.