ಬೆಂಗಳೂರು: ರಾಜ್ಯದ ವಿವಿಧೆಡೆ ಬುಧವಾರವೂ ಭಾರಿ ಮಳೆ ಮುಂದುವರಿಯುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ನಾಲ್ಕು ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಹಾಗೂ ಆರು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಮಳೆ ಬಿರುಸು ಪಡೆದಿದೆ. ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಬುಧವಾರ ‘ರೆಡ್ ಅಲರ್ಟ್’ ನೀಡಲಾಗಿದೆ. ಈ ಜಿಲ್ಲೆಗಳ ಕೆಲವೆಡೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಹಲವೆಡೆ ಸಾಧಾರಣ ಮಳೆ ಸುರಿಯಲಿದೆ.
ಬೆಳಗಾವಿ, ಧಾರವಾಡ, ಹಾವೇರಿ, ದಕ್ಷಿಣ ಕನ್ನಡ, ಹಾಸನ ಹಾಗೂ ಕೊಡಗು ಜಿಲ್ಲೆಗೆ ‘ಆರೆಂಜ್ ಅಲರ್ಟ್’ ನೀಡಲಾಗಿದೆ. ಈ ಜಿಲ್ಲೆಯ ಒಂದೆರಡು ಕಡೆ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಹಲವೆಡೆ ಸಾಧಾರಣ ಮಳೆಯಾಗುವ ಸಂಭವವಿದೆ. ಉಳಿದ ಜಿಲ್ಲೆಗಳಿಗೆ ಇಲಾಖೆಯು ‘ಯೆಲ್ಲೊ ಅಲರ್ಟ್’ ನೀಡಿದೆ. ರಾಜ್ಯದ ವಿವಿಧೆಡೆ ಮಳೆಯ ಜತೆಗೆ ಗಂಟೆಗೆ 30ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ.
ಕರಾವಳಿಯಲ್ಲಿ ಗಂಟೆಗೆ 35ರಿಂದ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಂಭವವಿದೆ. ಆದ್ದರಿಂದ ಮೀನುಗಾರರು ಎಚ್ಚರ ವಹಿಸಬೇಕು ಎಂದು ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಗಂಟೆಗೆ 30ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಂಭವವಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ವಿವಿಧೆಡೆ ಇದೇ 26ರವರೆಗೂ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.