ADVERTISEMENT

ಸಮಸ್ಯೆಗಳ ಬಿಡಿಸಿಟ್ಟ ಹೆಸರಘಟ್ಟ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2018, 18:52 IST
Last Updated 12 ನವೆಂಬರ್ 2018, 18:52 IST
ನಂಜುಂಡೇಶ್ವರ ಬಡಾವಣೆಯ ನಿವಾಸಿಗಳ ಜತೆ ಶಾಸಕ ಮಂಜುನಾಥ್ ಮಾತನಾಡಿದರು 
ನಂಜುಂಡೇಶ್ವರ ಬಡಾವಣೆಯ ನಿವಾಸಿಗಳ ಜತೆ ಶಾಸಕ ಮಂಜುನಾಥ್ ಮಾತನಾಡಿದರು    

ಬೆಂಗಳೂರು: ಹೆಸರಘಟ್ಟ ಮುಖ್ಯ ರಸ್ತೆಯಲ್ಲಿರುವ ಚಿಕ್ಕಬಾಣಾವರದ ನಂಜುಂಡೇಶ್ವರ ಬಡಾವಣೆಯ ನಿವಾಸಿಗಳು ತಾವು ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಉದ್ಘಾಟನೆಗೆ ಬಂದ ದಾಸರಹಳ್ಳಿ ಶಾಸಕ ಆರ್. ಮಂಜುನಾಥ್ ಅವರ ಬಳಿ ಬಡಾವಣೆಯ ಸಮಸ್ಯೆಗಳನ್ನು ತೆರೆದಿಟ್ಟರು.

ಮಳೆಗಾಲದಲ್ಲಿ ರಸ್ತೆ ಕೆಸರುಮಯವಾಗುತ್ತದೆ. ದ್ವಿಚಕ್ರ ವಾಹನಗಳು ಚಲಿಸುವುದು ಕಷ್ಟ. ಶಾಲಾ ವಾಹನಗಳು ಸಹ ರಸ್ತೆಯಲ್ಲಿ ಓಡಾಡುವುದರಿಂದ ರಸ್ತೆಯನ್ನು ಡಾಂಬರೀಕರಣ ಮಾಡಿಕೊಡಿ ಎಂದು ಶಾಸಕರಲ್ಲಿ ಮನವಿ ಮಾಡಿದರು.

ಗ್ರಾಮ ಪಂಚಾಯಿತಿಯ ಕೆಲವು ಸದಸ್ಯರು ರಾಜಕಾಲುವೆಯ ಮಾರ್ಗವನ್ನು ಬದಲಾಯಿಸಿ ಬಡಾವಣೆಯ ಕಡೆ ತಿರುಗಿಸಿದ ಪರಿಣಾಮ, ಮನೆ ಬಾಗಿಲಿನ ಬಳಿ ನೀರು ನಿಲ್ಲುತ್ತಿದೆ. ರಾಜ ಕಾಲುವೆಯನ್ನು ಅಳತೆ ಮಾಡಿಸಿಕೊಡಿ ಎಂದು ಕೇಳಿಕೊಂಡರು.

ADVERTISEMENT

‘ಹಿಂದಿನ ಶಾಸಕರಾದ ಮುನಿರಾಜು ಅವರಿಗೆ ಕುಡಿಯುವ ನೀರು ಮತ್ತು ರಸ್ತೆ ಅಭಿವೃದ್ಧಿಪಡಿಸುವಂತೆ ಕೇಳಿಕೊಂಡು ಮನೆಗೆ ಬಾಗಿಲಿಗೆ ಹೋದಾಗ ‘ರೆವಿನ್ಯೂ ಸೈಟ್‍ನಲ್ಲಿ ಮನೆ ಕಟ್ಟಿಕೊಳ್ಳಲು ನಿಮ್ಗೆ ನಾನು ಹೇಳಿದ್ನ. ಹೋಗ್ರೋ’ ಎಂದು ಗದರಿದ್ದರು. ನೀವಾದರೂ ಕುಡಿಯುವ ನೀರು ಕೊಡಿ ಸ್ವಾಮಿ’ ಎಂದು ಬಡಾವಣೆ ನಿವಾಸಿ ಸರೋಜಮ್ಮ ಕಣ್ಣೀರು ಹಾಕಿದರು.

ಶಾಸಕ ಮಂಜುನಾಥ್ ಮಾತನಾಡಿ ‘ಕುಡಿಯುವ ನೀರು ಮತ್ತು ರಸ್ತೆಯನ್ನು ಇನ್ನೆರಡು ತಿಂಗಳಲ್ಲಿ ಅಭಿವೃದ್ಧಿ ಪಡಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.