ADVERTISEMENT

₹ 200 ಕೋಟಿಗೂ ಮೀರಿದ ಬೇನಾಮಿ ಆಸ್ತಿ ಗಳಿಕೆ ಆರೋಪ

ಆಕ್ಷೇಪಣೆ ಸಲ್ಲಿಸಲು ಐ.ಟಿಗೆ ಹೈಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2019, 19:34 IST
Last Updated 26 ಸೆಪ್ಟೆಂಬರ್ 2019, 19:34 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ನಗರದಲ್ಲಿ ನೆಲೆಸಿರುವ ರಾಜಸ್ಥಾನದ ಇಬ್ಬರು ಮಹಿಳೆಯರು ತಮ್ಮ ಆದಾಯದ ಮೂಲಗಳನ್ನು ಬಚ್ಚಿಟ್ಟು ₹ 200 ಕೋಟಿಗೂ ಮೀರಿ ಆಸ್ತಿ ಗಳಿಸಿ ತೆರಿಗೆ ವಂಚಿಸಿದ್ದಾರೆ’ ಎಂದು ಆರೋಪಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಆದಾಯ ತೆರಿಗೆ ಇಲಾಖೆಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಈ ಕುರಿತಂತೆ ನಗರದ ಲೆಕ್ಕ ಪರೀಕ್ಷಕ (ಆಡಿಟರ್) ಕೆ.ಸುರೇಶ್‌ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್‌ ಅರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ಪ್ರತಿವಾದಿಯಾದ ಆದಾಯ ತೆರಿಗೆ ಇಲಾಖೆ ತನಿಖಾ ವಿಭಾಗದ ಮಹಾನಿರ್ದೇಶಕರಿಗೆ ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎನ್‌.ಪಿ. ಅಮೃತೇಶ್‌ ವಾದ ಮಂಡಿಸಿ, ‘ಬೇನಾಮಿ ವ್ಯವಹಾರ ತಡೆ ತಿದ್ದುಪಡಿ ಕಾಯ್ದೆ–2016ರ ಅನುಸಾರ ಅರ್ಜಿದಾರರು, ಸುನೀತಾ ಶರ್ಮ ಮತ್ತು ಅವರ ಪುತ್ರಿ ಸುಶೀಲಾ ಶರ್ಮ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದರೂ ಈತನಕ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ತನಿಖೆಗೆ ನಿರ್ದೇಶಿಸಬೇಕು’ ಎಂದು ಕೋರಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಈ ಕುರಿತಂತೆ ಲಿಖಿತ ಆಕ್ಷೇಪಣೆ ಸಲ್ಲಿಸಿ’ ಎಂದು ಆದಾಯ ತೆರಿಗೆ ಇಲಾಖೆ ಪರ ವಕೀಲರಿಗೆ ನಿರ್ದೇಶಿಸಿತು. ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ಮುಂದೂಡಲಾಗಿದೆ.

ಪ್ರಕರಣವೇನು?: ‘ಕೋಟ್ಯಂತರ ರೂಪಾಯಿ ಆದಾಯ ತೆರಿಗೆ ವಂಚಿಸಿರುವ ಸುನೀತಾ ಶರ್ಮ (44) ಮತ್ತು ಸುಶೀಲಾ ಶರ್ಮ (57) ರಾಜಸ್ಥಾನದವರು. ಇವರು ಕೆಲಕಾಲ ಮುಂಬೈನಲ್ಲಿದ್ದು 1996ರಲ್ಲಿ ಬೆಂಗಳೂರಿಗೆ ಬಂದರು. ಬೆಂಗಳೂರಿನ ಏಳು ವಿವಿಧ ಸ್ಥಳಗಳಲ್ಲಿ ತಮ್ಮ ವಿಳಾಸ ಹೊಂದಿದ್ದಾರೆ. ಇವರಿಬ್ಬರ ವಿರುದ್ಧ ಬೆಂಗಳೂರು, ಮುಂಬೈ, ಜಮ್ಮು–ಕಾಶ್ಮೀರ ಮತ್ತು ಚೆನ್ನೈನಲ್ಲಿ ಅನೇಕ ಕ್ರಿಮಿನಲ್‌ ಪ್ರಕರಣಗಳಿವೆ’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

‘ಇವರು ಕರ್ನಾಟಕ ಭೂ ಸುಧಾರಣೆ ಮತ್ತು ಭೂ ಕಂದಾಯ ಕಾಯ್ದೆಗೆ ವಿರುದ್ಧವಾಗಿ ಬೆಂಗಳೂರು ನಗರದ ಸುತ್ತಮುತ್ತ 130 ಎಕರೆಗೂ ಹೆಚ್ಚು ಜಮೀನನ್ನು ಖರೀದಿ ಮಾಡಿದ್ದಾರೆ. ₹ 200 ಕೋಟಿಗೂ ಮಿಕ್ಕಿದ ಸ್ಥಿರ ಮತ್ತು ಚರಾಸ್ತಿ ಹೊಂದಿದ್ದಾರೆ. ಆದರೆ, ಇವರು ಬೆಂಗಳೂರು ಉತ್ತರ ತಾಲ್ಲೂಕು ತಹಶೀಲ್ದಾರ್ ಅವರಿಗೆ ಸಲ್ಲಿಸಿರುವ ದಾಖಲೆಗಳಲ್ಲಿ ತಮ್ಮ ವಾರ್ಷಿಕ ಆದಾಯ ₹ 1.80 ಲಕ್ಷ ಎಂದು ನಮೂದಿಸಿದ್ದಾರೆ’ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

‘ಎರಡು ಪ್ಯಾನ್‌ ಕಾರ್ಡ್‌ ಹೊಂದಿದ್ದಾರೆ’

‘ಸುನೀತಾ ಶರ್ಮ ಮತ್ತು ಸುಶೀಲಾ ಶರ್ಮ ತಲಾ ಎರಡು ಪ್ಯಾನ್‌ ಕಾರ್ಡ್‌ಗಳನ್ನು ಹೊಂದಿದ್ದಾರೆ’ ಎಂದು ಅರ್ಜಿಯಲ್ಲಿ ದೂರಲಾಗಿದೆ.

‘ಇವರಿಬ್ಬರ ಬೇನಾಮಿ ವ್ಯವಹಾರ, ಆದಾಯ ತೆರಿಗೆ ವಂಚನೆ, ಕಾನೂನು ಬಾಹಿರವಾಗಿ ಕೃಷಿ ಜಮೀನು ಖರೀದಿ ಕುರಿತಂತೆ ನಗರದ ಆದಾಯ ತೆರಿಗೆ ಇಲಾಖೆಗೆ 2017ರ ಜೂನ್‌ 3ರಂದು ಸೂಕ್ತ ದಾಖಲೆಗಳ ಆಧಾರದಡಿ ದೂರು ನೀಡಲಾಗಿದೆ. ಆದರೆ, ಐ.ಟಿ ಅಧಿಕಾರಿಗಳು ಈ ತನಿಖೆ ನಡೆಸುತ್ತಿಲ್ಲ. ಕೇಳಿದರೆ ಸಬೂಬು ಹೇಳುತ್ತಿದ್ದಾರೆ’ ಎಂದು ಆಕ್ಷೇಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.