ADVERTISEMENT

ಬಿಎಂಟಿಸಿಯಿಂದ ಹೊಸ ಬಸ್‌ಗಳ ಖರೀದಿ ಪ್ರಕ್ರಿಯೆ: ಹೈಕೋರ್ಟ್ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 2 ಜನವರಿ 2023, 23:03 IST
Last Updated 2 ಜನವರಿ 2023, 23:03 IST
ಬಿಎಂಟಿಸಿಯಿಂದ ಹೊಸ ಬಸ್‌ಗಳ ಖರೀದಿ ಪ್ರಕ್ರಿಯೆ: ಹೈಕೋರ್ಟ್ ನೋಟಿಸ್‌
ಬಿಎಂಟಿಸಿಯಿಂದ ಹೊಸ ಬಸ್‌ಗಳ ಖರೀದಿ ಪ್ರಕ್ರಿಯೆ: ಹೈಕೋರ್ಟ್ ನೋಟಿಸ್‌   

ಬೆಂಗಳೂರು: ಹೊಸ ಬಸ್‌ಗಳ ಖರೀದಿ ಪ್ರಕ್ರಿಯೆಗೆ ಮುಂದಾಗಿರುವ ಬೆಂಗಳೂರು ಮೆಟ್ರೊಪಾಲಿಟನ್‌ ಸಾರಿಗೆ ಕಾರ್ಪೊರೇಷನ್‌ (ಬಿಎಂಟಿಸಿ) ಕ್ರಮವನ್ನು ಪ್ರಶ್ನಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್‌) ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಪೋಲಿಯೊ ಪೀಡಿತ ಅಂಗವಿಕಲ ಸುನಿಲ್‌ ಕುಮಾರ್ ಜೈನ್‌ ಎಂಬುವವರು ಸಲ್ಲಿಸಿರುವ ಪಿಐಎಲ್‌ ಅನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಮನು ಕುಲಕರ್ಣಿ, ‘ಬಿಎಂಟಿಸಿ ಖರೀದಿಸುತ್ತಿರುವ 840 ಹೊಸ ಬಸ್‌ಗಳಲ್ಲಿ ಅಂಗವಿಕಲರಿಗೆ ಸೂಕ್ತ ಸೌಲಭ್ಯಗಳಿಲ್ಲ. ಅವರು ಬಸ್‌ ಹತ್ತಲು ಹಾಗೂ ಗಾಲಿ ಕುರ್ಚಿ ಪ್ರವೇಶಿಸಲು ಅನುಕೂಲತೆ ಇಲ್ಲ. ಹಾಗಾಗಿ, ಟೆಂಡರ್‌ ಪ್ರಕ್ರಿಯೆ ದೋಷಪೂರ್ಣವಾಗಿದೆ‘ ಎಂದರು.

ADVERTISEMENT

‘ಬಸ್‌ ಹತ್ತುವ ಮೆಟ್ಟಿಲಿನ ಎತ್ತರ 400 ಮಿಲಿ ಮೀಟರ್‌ನಿಂದ ಗರಿಷ್ಠ 650 ಮಿಮೀ ಇರುವಂತೆ ಅಂದರೆ, ಗಾಲಿಕುರ್ಚಿ ಮೂಲಕ ಪ್ರವೇಶಿಸಲು ಅನುಕೂಲವಾಗುವಂತೆ ಇರಬೇಕು. ಆದರೆ, ಈಗ ಖರೀದಿಸಲಾಗುತ್ತಿರುವ ಬಸ್‌ಗಳ ಎತ್ತರ ಹೆಚ್ಚಿದೆ. ಹೀಗಾಗಿ, ಬಿಎಂಟಿಸಿ 2022ರ ಅಕ್ಟೋಬರ್ 28ರಂದು ಹೊರಡಿಸಿರುವ ಟೆಂಡರ್‌ ಆದೇಶದ ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡಬೇಕು. ಬಸ್ ಖರೀದಿ ಪ್ರಕ್ರಿಯೆಯು ಈ ಅರ್ಜಿಯ ಕುರಿತಾದ ಅಂತಿಮ ಆದೇಶಕ್ಕೆ ಒಳಪಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿ ಮಧ್ಯಂತರ ಆದೇಶ ಹೊರಡಿಸಬೇಕು’ ಎಂದು ಕೋರಿದರು.

ವಾದ ಆಲಿಸಿದ ನ್ಯಾಯಪೀಠ ಪ್ರಕರಣದ ಪ್ರತಿವಾದಿಗಳಾದ ಬಿಎಂಟಿಸಿ ಅಧ್ಯಕ್ಷ, ಸಾರಿಗೆ ಇಲಾಖೆ ಕಾರ್ಯದರ್ಶಿ, ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ, ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಹಾಗೂ ಅಂಗವಿಕಲರ ಸಬಲೀಕರಣ ಸಚಿವಾಲಯದ ಕಾರ್ಯದರ್ಶಿಗಳಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿತು. ಎರಡು ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ಆದೇಶಿಸಿ ವಿಚಾರಣೆ ಮುಂದೂಡಿತು.

‘ವಿವೇಚನಾರಹಿತ ಆದೇಶ ಸಲ್ಲ’

ಖಾಸಗಿ ಸಂಸ್ಥೆಯೊಂದನ್ನು ಕಪ್ಪು ಪಟ್ಟಿಗೆ ಸೇರಿಸಿದ್ದ ರೈಲ್ವೆ ಇಲಾಖೆಯ ಕ್ರಮವನ್ನು ರದ್ದುಪಡಿಸಿರುವ ಹೈಕೋರ್ಟ್‌, ‘ಅಧಿಕಾರಿಗಳು ಹೊರಡಿಸುವ ಆದೇಶಗಳು ವಿವೇಚನಾ ರಹಿತವಾಗಿದ್ದರೆ ಅಂತಹ ಆದೇಶಗಳು ಅಸಮಂಜಸವಾಗುತ್ತವೆ’ ಎಂದು ಅಭಿಪ್ರಾಯಪಟ್ಟಿದೆ.

ಈ ಸಂಬಂಧ ‘ಕೃಷಿ ಇನ್ಫ್ರಾಟೆಕ್‘ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ನ್ಯಾಯಾಂಗ, ಅರೆ ನ್ಯಾಯಾಂಗ ಮತ್ತು ಆಡಳಿತಾಧಿಕಾರಿಗಳು ನೀಡುವ ಆದೇಶಗಳು ಮುಂದಾಲೋಚನೆ ಮತ್ತು ವಿವೇಚನೆಯನ್ನು ಒಳಗೊಳ್ಳದೇ ಹೋದರೆ ಅಂತಹ ನಿರ್ಧಾರಗಳು ನಿರ್ಜೀವ ಎನಿಸಲಿವೆ’ ಎಂದಿದೆ.

‘ಯಾವುದೇ ಪ್ರಕರಣಗಳಲ್ಲಿ ನಿರ್ಧಾರ ಕೈಗೊಳ್ಳುವಾಗ ಗಂಭೀರ ಪರಿಶೀಲನೆ ನಡೆಸಬೇಕು. ಸಂಸ್ಥೆಯೊಂದನ್ನು ಕಪ್ಪು ಪಟ್ಟಿಗೆ ಸೇರಿಸುವಾಗ ಅದಕ್ಕೆ ಬಲವಾದ ಸಮರ್ಥನೆ ಮತ್ತು ಅದರಲ್ಲಿ ತರ್ಕಬದ್ಧತೆ ಇರಬೇಕು. ರೈಲ್ವೆ ಅಧಿಕಾರಿಗಳು ಒಂದು ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸುವ ಸಂದರ್ಭದಲ್ಲಿ ನೋಟಿಸ್ ಜಾರಿ ಮಾಡಿದರೆ ಮಾತ್ರವೇ ಸಾಕಾಗುವುದಿಲ್ಲ. ಪ್ರತಿವಾದಿಗಳು ಸಲ್ಲಿಸುವ ಆಕ್ಷೇಪಣೆ ಮತ್ತು ಮನವಿಗಳನ್ನೂ ಪರಿಶೀಲಿಸಿ ಸೂಕ್ತ ತೀರ್ಮಾನ ಪ್ರಕಟಿಸಬೇಕು. ಇಲ್ಲವಾದರೆ ಅದು ವಿವೇಚನಾ ರಹಿತ ಆದೇಶ ಎನಿಸುತ್ತದೆ’ ಎಂದು ನ್ಯಾಯಪೀಠ ಹೇಳಿದೆ.

ರೈಲ್ವೆ ಅಧಿಕಾರಿಗಳ ಆದೇಶವನ್ನು ರದ್ದುಪಡಿಸಿರುವ ನ್ಯಾಯಪೀಠ, ‘ಕಾನೂನು ಪ್ರಕಾರ ಸೂಕ್ತ ಆದೇಶವನ್ನು ಹೊರಡಿಸಿ’ ಎಂದು ರೈಲ್ವೆ ಮಂಡಳಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.