ADVERTISEMENT

ಶೇ 30 ದಾಟದ ಹೋಟೆಲ್ ವಹಿವಾಟು

ಲಾಕ್‌ಡೌನ್‌ ತೆರವಾದರೂ ಚೇತರಿಕೆ ಕಾಣದ ಉದ್ಯಮ

ವಿಜಯಕುಮಾರ್ ಎಸ್.ಕೆ.
Published 18 ಆಗಸ್ಟ್ 2020, 7:19 IST
Last Updated 18 ಆಗಸ್ಟ್ 2020, 7:19 IST

ಬೆಂಗಳೂರು: ಕೊರೊನಾ ಲಾಕ್‌ಡೌನ್‌ನಿಂದಾಗಿ ಸಂಪೂರ್ಣ ನೆಲಕಚ್ಚಿದ್ದ ಹೋಟೆಲ್ ಉದ್ಯಮ ಕೊಂಚ ಚೇತರಿಕೆಯ ಹಾದಿಯಲ್ಲಿದ್ದರೂ, ವಹಿವಾಟು ಶೇ 30ಕ್ಕಿಂತ ಹೆಚ್ಚಾಗಿಲ್ಲ.

ಬೆಂಗಳೂರಿನಲ್ಲಿ ದರ್ಶಿನಿಯಿಂದ ಹಿಡಿದು ಸಸ್ಯಾಹಾರಿ ಹೋಟೆಲ್, ಮಾಂಸಾಹಾರಿ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್ ಮತ್ತು ಪಂಚತಾರಾ ಹೋಟೆಲ್‌ಗಳು ಸೇರಿ 25 ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳಿವೆ. ದಿನಕ್ಕೆ ₹10 ಸಾವಿರ ವಹಿವಾಟು ನಡೆಸುವ ದರ್ಶಿನಿಗಳಿಂದ ಹಿಡಿದು ಲಕ್ಷಗಟ್ಟಲೆ ವಹಿವಾಟು ನಡೆಸುವ ಹೋಟೆಲ್‌ಗಳೂ ಇವೆ.

ಈ ಎಲ್ಲವುಗಳಿಂದ ದಿನಕ್ಕೆ ಕನಿಷ್ಠ ₹250 ಕೋಟಿ ವಹಿವಾಟು ನಡೆಯುತ್ತಿತ್ತು ಎಂದು ಹೋಟೆಲ್ ಮಾಲೀಕರು ಹೇಳುತ್ತಾರೆ. ಜಿಎಸ್‌ಟಿ ಮತ್ತು ಆಸ್ತಿ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಹೋಟೆಲ್ ಉದ್ಯಮ ಸಾಕಷ್ಟು ಕೊಡುಗೆ ನೀಡುತ್ತಿತ್ತು.

ADVERTISEMENT

‘ಲಾಕ್‌ಡೌನ್ ತೆರವಾದರೂ ಗ್ರಾಹಕರಿಲ್ಲದ ಕಾರಣ ಶೇ 50ರಷ್ಟು ಹೋಟೆಲ್‌ಗಳನ್ನು ಮಾಲೀಕರು ತೆರೆದೇ ಇಲ್ಲ. ತೆರೆಯದೇ ಇರುವವರಲ್ಲಿ ಶೇ 30ರಷ್ಟು ಮಂದಿ ಶಾಶ್ವತವಾಗಿ ಹೋಟೆಲ್‌ ಉದ್ಯಮ ತೊರೆಯುವ ಸಾಧ್ಯತೆ ಇದೆ’ ಎನ್ನುತ್ತಾರೆ ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ಉಪಾಹಾರ ಮಂದಿರಗಳ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್.

‘ತೆರೆದಿರುವ ಹೋಟೆಲ್‌ಗಳಲ್ಲಿ ಈ ಹಿಂದಿನ ವಹಿವಾಟಿಗೆ ಹೋಲಿಸಿದರೆ ಶೇ 20ರಷ್ಟೂ ಇಲ್ಲ. ಇದು ಹೋಟೆಲ್ ಉದ್ಯಮದ ಮೇಲಷ್ಟೇ ಅಲ್ಲ, ಸರ್ಕಾರದ ಆರ್ಥಿಕತೆಯ ಮೇಲೂ ಸಾಕಷ್ಟು ಪರಿಣಾಮ ಬೀರುತ್ತದೆ’ ಎಂದು ಅವರು ಹೇಳಿದರು.

‘ಬೆಂಗಳೂರಿನ ಹೋಟೆಲ್‌ಗಳಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಪಾತ್ರೆಗಳನ್ನು ಬಿಸಿ ನೀರಿನ ಹಬೆಯಲ್ಲಿಟ್ಟು ತೊಳೆಯಲಾಗುತ್ತದೆ. ಬಳಸಿ ಬಿಸಾಡಬಹುದಾದ ಲೋಟ ಮತ್ತು ತಟ್ಟೆಗಳನ್ನೇ ಬಳಸಲಾಗುತ್ತಿದೆ. ಬಹುತೇಕ ಹೋಟೆಲ್‌ಗಳಲ್ಲಿ ನೀರು ಶುದ್ಧೀಕರಣ ಘಟಕಗಳು ಇವೆ. ಅಡುಗೆ ಮಾಡಲು ಶುದ್ಧ ನೀರನ್ನೇ ಬಳಸಲಾಗುತ್ತದೆ. ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಮತ್ತು ಗ್ಲೌಸ್ ಧರಿಸುತ್ತಾರೆ. ಹೀಗಾಗಿ ಹೋಟೆಲ್‌ಗಳಲ್ಲಿ ಊಟ, ಉಪಾಹಾರ ಸೇವಿಸುವುದರಿಂದ ತೊಂದರೆ ಆಗುವುದಿಲ್ಲ. ಆದರೂ ಕುಟುಂಬ ಸಮೇತ ಜನ ಹೋಟೆಲ್‌ಗೆ ಬರುತ್ತಿಲ್ಲ’ ಎಂದು ಅವರು ತಿಳಿಸಿದರು.

‘ಇಷ್ಟೆಲ್ಲಾ ಮುನ್ನೆಚ್ಚರಿಕೆ ವಹಿಸಿರುವ ಕಾರಣ ಹೋಟೆಲ್‌ಗಳಲ್ಲಿ ಆಹಾರ ಸೇವಿಸುವುದರಿಂದ ಯಾವುದೇ ತೊಂದರೆ ಆಗದು ಎಂಬುದನ್ನು ಜನರಿಗೆ ತಜ್ಞರು, ವೈದ್ಯರು ಮನವರಿಕೆ ಮಾಡುವ ಅಗತ್ಯವಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.