ADVERTISEMENT

ಐಎಂಎ ಹಗರಣ: ಸಕ್ಷಮ ಪ್ರಾಧಿಕಾರ ರದ್ದು ಕೋರಿ ಮನ್ಸೂರ್ ಖಾನ್ ನ್ಯಾಯಾಲಯಕ್ಕೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 10:12 IST
Last Updated 10 ಅಕ್ಟೋಬರ್ 2019, 10:12 IST
   

ಬೆಂಗಳೂರು: ಐಎಂಎ ವಂಚನೆ ಪ್ರಕರಣದಲ್ಲಿ ಸಕ್ಷಮ ಪ್ರಾಧಿಕಾರ ರಚಿಸಿರುವ ಸರ್ಕಾರದ ಆದೇಶ ರದ್ದು ಕೋರಿ ಮನ್ಸೂರ್ ಖಾನ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದಹೈಕೋರ್ಟ್‌ ನ್ಯಾಯಪೀಠವುಸರ್ಕಾರದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ.

ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಆದೇಶಿಸಿರುವ ನ್ಯಾಯಪೀಠ, ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ‌ ವಿಚಾರಣೆ ಮುಂದೂಡಿದೆ.

ಮತ್ತಿಬ್ಬರ ವಿರುದ್ಧ ಸಿಬಿಐ ದೋಷಾರೋಪ ಪಟ್ಟಿ

ADVERTISEMENT

ಐಎಂಎ ಸಮೂಹ ಕಂಪನಿಯ ಮಾಲೀಕ, ಷೇರುದಾರರಿಗೆ ಕೋಟ್ಯಂತರ ಹಣ ವಂಚಿಸಿದ ಪ್ರಕರಣದಲ್ಲಿ, ಈ ಹಿಂದೆ ವಿಶೇಷ ತನಿಖಾ ದಳ (ಎಸ್‌ಐಟಿ) ಬಂಧಿಸಿದ ಇಬ್ಬರು ಆರೋಪಿಗಳ ವಿರುದ್ಧ ಸಿಬಿಐ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಆರೋಪಿಗಳಾದ ಮೊಹ್ಮದ್‌ ಹನೀಫ್‌ ಅಫ್ಸರ್‌ ಅಜೀಜ್‌ ಮತ್ತು ಖಲೀಲ್‌ ಉಲ್ಲಾ ಜಮಾಲ್‌ ವಿರುದ್ಧ ಇದೇ ಶನಿವಾರ (ಅ. 5) ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶಿವಾಜಿನಗರದ ಒಪಿಎಚ್ ರಸ್ತೆಯಲ್ಲಿರುವ ಬೇಪಾರಿಯನ್ ಮಸೀದಿಯ ಮೌಲ್ವಿ (ಧರ್ಮಗುರು) ಹನೀಫ್‌, ಐಎಂಎ ಬಗ್ಗೆ ಪ್ರಚಾರ ಮಾಡುತ್ತಿದ್ದ. ಆ ಮೂಲಕ, ಕಂಪನಿಯಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿದ್ದ. ಮೌಲ್ವಿ ಅವರನ್ನು ಖುಷಿಪಡಿಸುವುದಕ್ಕಾಗಿ ಮನ್ಸೂರ್‌ ಖಾನ್, ₹ 3 ಕೋಟಿ ಮೌಲ್ಯದ ಮನೆಯನ್ನು ಉಡುಗೊರೆಯಾಗಿ ಕೊಟ್ಟಿದ್ದ. ಈ ಆಸ್ತಿಯನ್ನು ಕೆಪಿಐಡಿ ಕಾಯ್ದೆ– 2004 ಅಡಿ ಸಕ್ಷಮ ಪ್ರಾಧಿಕಾರ ಈಗಾಗಲೇ ಮುಟ್ಟುಗೋಲು ಹಾಕಿಕೊಂಡಿದೆ. ಅಲ್ಲದೆ, ತನ್ನ ಕೆಲಸಕ್ಕೆ ಮೌಲ್ವಿ ಹಣವನ್ನೂ ಪಡೆಯುತ್ತಿದ್ದ.

ಪ್ರಕರಣದಲ್ಲಿ 25ನೇ ಆರೋಪಿಯಾಗಿರುವ ಖಲೀಲ್ ಉಲ್ಲಾ ಜಮಾಲ್, ಐಎಂಎ ಕಂಪನಿಯಿಂದ ವಸೂಲಿ ಮಾಡಿದ ಹಣದಲ್ಲಿ ಪತ್ನಿ ಹೆಸರಿಗೆ ಆಸ್ತಿ ಖರೀದಿಸಿದ ಆರೋಪ ಎದುರಿಸುತ್ತಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ. ಐಎಂಎ ಪ್ರಕರಣದಲ್ಲಿ ಈ ಇಬ್ಬರ ಪಾತ್ರದ ಬಗ್ಗೆ ತನಿಖೆ ಪೂರ್ಣಗೊಳಿಸಿದ ಬಳಿಕ, ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿದೆ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.