ADVERTISEMENT

ಇಂದಿರಾನಗರ ಸ್ಕೈ ವಾಕ್‌ ನಿರ್ಮಾಣಕ್ಕೆ ತಡೆ ಕೋರಿ ಪಿಐಎಲ್‌

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2019, 19:45 IST
Last Updated 21 ಫೆಬ್ರುವರಿ 2019, 19:45 IST

ಬೆಂಗಳೂರು: ಇಂದಿರಾನಗರದ 100 ಅಡಿ ರಸ್ತೆ ಬಳಿಯ ಧೂಪನಹಳ್ಳಿಯಲ್ಲಿ ಕೈಗೊಂಡಿರುವ ಸ್ಕೈ ವಾಕ್ ನಿರ್ಮಾಣ ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್‌) ಸಂಬಂಧಿಸಿದಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ಇಂದಿರಾನಗರದ ಜಗದೀಶ್ ಸಂತೋಷ್ ಮಾನಿ ಸೇರಿದಂತೆ 16 ಮಂದಿ ಸಲ್ಲಿಸಿರುವ ಪಿಐಎಲ್ ಅನ್ನು ನ್ಯಾಯಮೂರ್ತಿ ರವಿ ಮಳಿಮಠ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿದೆ.

ಪ್ರತಿವಾದಿಗಳಾದ ಬಿಬಿಎಂಪಿ ಆಯುಕ್ತರು, ರಸ್ತೆ ಮೂಲಸೌಕರ್ಯ ವಿಶೇಷ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ಸ್ಕೈವಾಕ್ ಕಾಮಗಾರಿ ಗುತ್ತಿಗೆ ಪಡೆದಿರುವ ಮೆಸರ್ಸ್‌ ವಿಸ್ಡಮ್ ಔಟ್‌ಲುಕ್ ಕಂಪನಿ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಲಾಗಿದೆ.

ADVERTISEMENT

ಮನವಿ ಏನು?: ಸ್ಕೈವಾಕ್ ನಿರ್ಮಾಣಕ್ಕೆ ಗುರುತಿಸಲಾಗಿರುವ ಸ್ಥಳದಿಂದ 100 ಮೀಟರ್ ಅಂತರದಲ್ಲೇ ಮತ್ತೊಂದು ಸ್ಕೈವಾಕ್ ಇದೆ. ಹೀಗಾಗಿ ಒಂದೇ ಪ್ರದೇಶದಲ್ಲಿ ಮತ್ತೊಂದು ಸ್ಕೈವಾಕ್‌ನ ಅಗತ್ಯವಿಲ್ಲ’ ಎಂಬುದು ಅರ್ಜಿದಾರರ ವಾದ.

‘ಇಂದಿರಾನಗರ 12ನೇ ಮುಖ್ಯರಸ್ತೆಯಲ್ಲಿ ಶಾಲೆಯಿದೆ. ಅಲ್ಲಿ ಸ್ಕೈವಾಕ್ ನಿರ್ಮಿಸಿದರೆ ಅನುಕೂಲವಾಗುತ್ತದೆ ಎಂದು ಬಿಬಿಎಂಪಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಈ ಮನವಿ ಪರಿಗಣಿಸಲ್ಲ. ಆದ್ದರಿಂದ ಈ ಅರ್ಜಿ ಇತ್ಯರ್ಥವಾಗುವವರೆಗೆ ಕಾಮಗಾರಿ ಮುಂದುವರಿಸದಂತೆ ಪ್ರತಿವಾದಿಗಳಿಗೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಮನವಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.