ADVERTISEMENT

ಸೆಕ್ಯೂರಿಟಿ ಗಾರ್ಡ್‌ ಹೆಸರಲ್ಲಿ ₹2.25 ಕೋಟಿ ವಹಿವಾಟು

ಕಂಪನಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸೌತ್ ಇಂಡಿಯಾ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2019, 20:12 IST
Last Updated 3 ಮಾರ್ಚ್ 2019, 20:12 IST
   

ಬೆಂಗಳೂರು: ₹10 ಸಾವಿರ ಸಂಬಳ ಪಡೆಯುತ್ತಿದ್ದ ಸೆಕ್ಯೂರಿಟಿ ಗಾರ್ಡ್ ರಮೇಶ್ ಚಂದ್ರಮಣಿ ಎಂಬುವರ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ಖಾತೆಯೊಂದನ್ನು ತೆರೆದು ₹2.25 ಕೋಟಿ ವಹಿವಾಟು ನಡೆಸಿದ ಆರೋಪದಡಿ ಜೆ.ಆರ್‌.ಜಿ ಸೆಕ್ಯೂರಿಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಂತೋಷ್‌ ಕುಮಾರ್ ಹಾಗೂ ಸೌತ್‌ ಇಂಡಿಯಾ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘ಸಂಬಳ ಜಮೆ ಮಾಡಲು ಬ್ಯಾಂಕ್ ಖಾತೆ ತೆರೆಯಲಾಗುವುದೆಂದು ನಂಬಿಸಿ ದಾಖಲಾತಿಗಳನ್ನು ಪಡೆದಿದ್ದ ಸಂತೋಷ್‌ ಕುಮಾರ್‌, ನನ್ನ ಗಮನಕ್ಕೆ ಬಾರದಂತೆ ಖಾತೆ ತೆರೆದು ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿದ್ದಾರೆ. ಅವರ ಕೃತ್ಯದಲ್ಲಿ ಸೌತ್‌ ಇಂಡಿಯಾ ಬ್ಯಾಂಕ್‌ ಅಧಿಕಾರಿಗಳು ಭಾಗಿಯಾಗಿದ್ದಾರೆ. ಅವರಿಬ್ಬರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಆರ್‌.ಟಿ.ನಗರ ಠಾಣೆಗೆ ರಮೇಶ್ ದೂರು ನೀಡಿದ್ದರು. ಆ ಪ್ರಕರಣವನ್ನು ತನಿಖೆಗಾಗಿ ಬಾಣಸವಾಡಿ ಠಾಣೆಗೆ ವರ್ಗಾಯಿಸಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ತಮಿಳುನಾಡಿನ ವಾಣಿಯಂಬಾಡಿಯ ರಮೇಶ್, 2011ರಲ್ಲಿ ಎಚ್‌ಬಿಆರ್‌ ಲೇಔಟ್‌ನ ಕಲ್ಯಾಣನಗರದಲ್ಲಿದ್ದ ಜೆ.ಆರ್‌.ಜಿ ಸೆಕ್ಯೂರಿಟಿ ಕಂಪನಿಯಲ್ಲಿ ಬ್ಯಾಕ್ ಆಫೀಸರ್ ಆಗಿ ಕೆಲಸಕ್ಕೆ ಸೇರಿದ್ದರು. ಅವರಿಗೆ ತಿಂಗಳಿಗೆ ₹10 ಸಾವಿರ ಸಂಬಳ ನಿಗದಿಪಡಿಸ
ಲಾಗಿತ್ತು.’

ADVERTISEMENT

‘ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಂತೋಷ್‌ಕುಮಾರ್, ‘ಸಂಬಳವನ್ನು ನೇರವಾಗಿ ಬ್ಯಾಂಕ್‌ ಖಾತೆಗೆ ಜಮೆ ಮಾಡಬೇಕು. ಅದಕ್ಕಾಗಿ ಸೌತ್ ಇಂಡಿಯಾ ಬ್ಯಾಂಕ್‌ನಲ್ಲಿ ನಿನ್ನ ಹೆಸರಿನಲ್ಲಿ ಖಾತೆ ತೆರೆಯಬೇಕು. ದಾಖಲೆಗಳನ್ನು ಕೊಡು’ ಎಂದು ಕೇಳಿದ್ದರು. ಅದನ್ನು ನಂಬಿದ್ದ ರಮೇಶ್, ಎರಡು ಭಾವಚಿತ್ರ, ಪ್ಯಾನ್ ಕಾರ್ಡ್, ಚಾಲನಾ ಪರವಾನಗಿ ಜೆರಾಕ್ಸ್ ಪ್ರತಿ ಕೊಟ್ಟಿದ್ದರು’ ಎಂದು ಅಧಿಕಾರಿ ವಿವರಿಸಿದರು.

‘ಎರಡು ತಿಂಗಳ ನಂತರ ಕೆಲಸ ಬಿಟ್ಟಿದ್ದ ರಮೇಶ್, ಊರಿಗೆ ಹೋಗಿದ್ದರು. ವೆಲ್ಲೂರಿನ ಆದಾಯ ತೆರಿಗೆ ಅಧಿಕಾರಿಗಳು, ಐಟಿ ಫೈಲ್ ಮಾಡುವಂತೆ 2018ರ ಮಾರ್ಚ್‌ 31ರಂದು ನೋಟಿಸ್ ಕಳುಹಿಸಿದ್ದರು. ಸಂಬಳ ₹10 ಸಾವಿರವಾಗಿದ್ದರಿಂದ ಐ.ಟಿ ಫೈಲ್ ಮಾಡಿರಲಿಲ್ಲ. ನಂತರ ಎರಡು ಜ್ಞಾಪನಾ ನೋಟಿಸ್‌ಗಳು ಬಂದಿದ್ದವು. ಅನುಮಾನಗೊಂಡ ರಮೇಶ್ ಆದಾಯ ತೆರಿಗೆ ಅಧಿಕಾರಿಗಳನ್ನು ವಿಚಾರಿಸಿದಾಗ, ‘ನಿಮ್ಮ ಪ್ಯಾನ್‌ ಕಾರ್ಡ್‌ ಬಳಸಿ ‘ಎಸ್‌.ಎಸ್‌.ಕ್ಯಾಪಿಟಲ್’ ಹೆಸರಿನ ಕಂಪನಿ ತೆರೆದು ಬೆಂಗಳೂರಿನ ಸೌತ್‌ ಇಂಡಿಯಾ ಬ್ಯಾಂಕ್‌ನಲ್ಲಿ ಖಾತೆ ತೆರೆದು ₹2.25 ಕೋಟಿ ವಹಿವಾಟು ನಡೆಸಲಾಗಿದೆ. ಕೂಡಲೇ ಐ.ಟಿ ಫೈಲ್ ಮಾಡಿ ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂಬುದಾಗಿ ಎಚ್ಚರಿಸಿದ್ದರು. ನಂತರವೇ ಅವರು ಠಾಣೆಗೆ ಬಂದು ದೂರು ನೀಡಿದ್ದರು’ ಎಂದು ಹಿರಿಯ ಅಧಿಕಾರಿ
ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.