ADVERTISEMENT

ಅರಮನೆ ಮೈದಾನಕ್ಕೆ ಟಿಡಿಆರ್‌: ಕಾನೂನು ಸಲಹೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 19:34 IST
Last Updated 5 ಜುಲೈ 2022, 19:34 IST

ಬೆಂಗಳೂರು: ಜಯಮಹಲ್ ರಸ್ತೆ ಹಾಗೂ ಬಳ್ಳಾರಿ ರಸ್ತೆಗಳ ವಿಸ್ತರಣೆಗೆ ಅರಮನೆ ಮೈದಾನದ ಜಾಗ ಸ್ವಾಧೀನಕ್ಕೆ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್‌) ನೀಡುವ ವಿಷಯದಲ್ಲಿ ಅಡ್ವೊಕೇಟ್‌ ಜನರಲ್ ಅವರಿಂದ ‌ಕಾನೂನು ಸಲಹೆ ಪಡೆದುಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಜಯಮಹಲ್‌ ರಸ್ತೆಯನ್ನು ಮೇಖ್ರಿ ವೃತ್ತದಿಂದ ಕಂಟೋನ್ಮೆಂಟ್‌ ರೈಲು ನಿಲ್ದಾಣದವರೆಗೆ ಹಾಗೂ ಬಳ್ಳಾರಿ ರಸ್ತೆಯನ್ನು ಬಿಡಿಎ ಜಂಕ್ಷನ್‌ನಿಂದ ಮೇಖ್ರಿ ವೃತ್ತದವರೆಗೆ ವಿಸ್ತರಿಸಲು ಬಿಬಿಎಂಪಿ 2009ರಲ್ಲೇ ಯೋಜನೆ ರೂಪಿಸಿತ್ತು. ಈ ಕಾಮಗಾರಿಗಳಿಗೆ ಅರಮನೆ ಮೈದಾನದ ಆಸ್ತಿಯಲ್ಲಿ 15 ಎಕರೆ 39 ಗುಂಟೆ ಜಾಗದ ಅವಶ್ಯಕತೆ ಇದ್ದು, ಸ್ವಾಧೀನಪಡಿಸಿಕೊಂಡು ಟಿಡಿಆರ್‌ ನೀಡುವ ಪ್ರಸ್ತಾವ ಸರ್ಕಾರದ ಮುಂದಿದೆ.

ಟಿಡಿಆರ್‌ ನೀಡಿದರೆ ಮುಂದೆ ಎದುರಾಗಲಿರುವ ತಾಂತ್ರಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸಭೆ ನಡೆದಿದೆ. ಸುಪ್ರೀಂ ಕೋರ್ಟ್‌ ಆದೇಶ ಸರ್ಕಾರದ ಪರವಾಗಿ ಬಂದರೆ ಟಿಡಿಆರ್‌ ವಾಪಸ್ ಪಡೆಯುವುದು ಕಷ್ಟವಾಗಲಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ADVERTISEMENT

‘ಟಿಡಿಆರ್‌ ವಿತರಿಸಬಹುದೇ, ವಿತರಿಸದಿದ್ದರೆ ನ್ಯಾಯಾಂಗ ನಿಂದನೆ ಆಗಲಿದೆಯೇ ಎಂಬುದರ ಪರಿಶೀಲನೆ ನಡೆಸುವ ಅಗತ್ಯವಿದೆ’ ಎಂದು ಮುಖ್ಯ ಕಾರ್ಯದರ್ಶಿ ಅಭಿಪ್ರಾಯಪಟ್ಟರು. ಅಡ್ವೊಕೇಟ್‌ ಜನರಲ್ ಅವರಿಗೆ ಕಡತ ಸಲ್ಲಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಬಿಡಿಎ ಆಯುಕ್ತರಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.