ADVERTISEMENT

‘ಶಾಸ್ತ್ರೀಯ ಕನ್ನಡ ಕೇಂದ್ರದ ಸ್ವಾಯತ್ತತೆಗೆ ಸಂಚಕಾರ’

ಕನ್ನಡ ಗೆಳೆಯರ ಬಳಗ ಕಳವಳ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 20:48 IST
Last Updated 26 ಡಿಸೆಂಬರ್ 2020, 20:48 IST

ಬೆಂಗಳೂರು: ‘ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರದ ಸ್ವಾಯತ್ತತೆಗೆ ಸಂಚಕಾರ ತರಲು ಕೇಂದ್ರ ಶಿಕ್ಷಣ ಸಚಿವಾಲಯ ಮುಂದಾಗಿದ್ದು, ರಾಜ್ಯ ಸರ್ಕಾರವು ಎಚ್ಚೆತ್ತುಕೊಳ್ಳಬೇಕು’ ಎಂದು ಕನ್ನಡ ಗೆಳೆಯರ ಬಳಗ ಆಗ್ರಹಿಸಿದೆ.

‘ಭಾರತೀಯ ಭಾಷಾ ಸಂಸ್ಥಾನವನ್ನು (ಸಿಐಐಎಲ್) ಭಾರತೀಯ ಭಾಷಾ ವಿಶ್ವವಿದ್ಯಾಲಯವನ್ನಾಗಿ (ಬಿಬಿವಿ) ಪರಿವರ್ತಿಸುವುದಕ್ಕೆ ತಮಿಳುನಾಡಿನಲ್ಲಿ ವಿರೋಧ ವ್ಯಕ್ತವಾಗಿದೆ. ಈ ವಿಚಾರವನ್ನು ನಮ್ಮ ಸಂಸದರು, ಕನ್ನಡ ಸಂಘಟನೆಗಳು ಗಂಭೀರವಾಗಿ ಪರಿಗಣಿಸಬೇಕು. ಈ ಪ್ರಸ್ತಾವನೆಯನ್ನು ಕೈಬಿಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ಒತ್ತಾಯಿಸಿದ್ದಾರೆ.

‘ಪ್ರಾದೇಶಿಕ ಆಯ್ಕೆ ಸಮಿತಿಗಳ ಮೂಲಕ ನಡೆಯುತ್ತಿದ್ದ ಬ್ಯಾಂಕ್ ನೇಮಕಾತಿಯನ್ನು ಕೇಂದ್ರ ಸರ್ಕಾರವು ರದ್ದುಪಡಿಸಿದೆ. ಬ್ಯಾಂಕಿಂಗ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ಮೂಲಕ ಕೇಂದ್ರೀಕೃತ ಆಯ್ಕೆ ಪ್ರಕ್ರಿಯೆಯನ್ನು ಈಗ ನಡೆಸಲಾಗುತ್ತಿದೆ. ರಾಜ್ಯದಲ್ಲಿರುವ ಬ್ಯಾಂಕ್‌ಗಳ ಶಾಖೆಗಳಲ್ಲೂ ಕನ್ನಡ ಗೊತ್ತಿರದ ಉತ್ತರ ಭಾರತೀಯರು ತುಂಬಿಕೊಳ್ಳುತ್ತಿದ್ದಾರೆ. ಸರ್ಕಾರಿ ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆಗಳನ್ನು ನಿರ್ವಹಿಸಲು ಹೊಸ ರಾಷ್ಟ್ರೀಯ ನೇಮಕಾತಿ ಸಂಸ್ಥೆಯನ್ನೂ ಕೇಂದ್ರ ಸರ್ಕಾರ ಸ್ಥಾಪಿಸಲು ಮುಂದಾಗಿದೆ. ಇದರ ಪರಿಣಾಮವನ್ನು ಕಾದುನೋಡಬೇಕಿದೆ. ಒಕ್ಕೂಟ ವ್ಯವಸ್ಥೆಯನ್ನು ಉಳಿಸುವ ದೃಷ್ಟಿಯಿಂದ ಇಂತಹ ಕೇಂದ್ರೀಕೃತ ವ್ಯವಸ್ಥೆಯನ್ನು ಕೈಬಿಡಬೇಕು. ವ್ಯವಸ್ಥೆಗಳ ವಿಕೇಂದ್ರೀಕರಣಕ್ಕೆ ಮುಂದಾಗಬೇಕು’ ಎಂದು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.