ADVERTISEMENT

ಕಸಾಪ: ಒಬ್ಬರಿಗೆ ಒಮ್ಮೆಯಷ್ಟೇ ಅಧ್ಯಕ್ಷಗಿರಿ

ಪರಿಷತ್ತಿನ ನಿಬಂಧನೆಗಳಿಗೆ ಆಮೂಲಾಗ್ರ ತಿದ್ದುಪಡಿ ತರುವುದಾಗಿ ಮಹೇಶ ಜೋಶಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 16:47 IST
Last Updated 26 ನವೆಂಬರ್ 2021, 16:47 IST
ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿ ಎಸ್. ರಂಗಪ್ಪ ಅವರು ಮಹೇಶ ಜೋಶಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ವಿ. ಸುನಿಲ್ ಕುಮಾರ್ ಮತ್ತು ಮನು ಬಳಿಗಾರ್ ಇದ್ದರು – ಪ್ರಜಾವಾಣಿ ಚಿತ್ರ
ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿ ಎಸ್. ರಂಗಪ್ಪ ಅವರು ಮಹೇಶ ಜೋಶಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ವಿ. ಸುನಿಲ್ ಕುಮಾರ್ ಮತ್ತು ಮನು ಬಳಿಗಾರ್ ಇದ್ದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ರಾಜ್ಯ ಘಟಕ, ಜಿಲ್ಲಾ ಘಟಕ ಮತ್ತು ತಾಲ್ಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಒಮ್ಮೆ ಆಯ್ಕೆಯಾದವರು ಮತ್ತೆ ಆ ಸ್ಥಾನಕ್ಕೆ ಏರುವುದು ಸರಿಯಲ್ಲ. ಈ ಬಗ್ಗೆ ಪರಿಷತ್ತಿನ ನಿಬಂಧನೆಗಳಿಗೆ ಆಮೂಲಾಗ್ರ ತಿದ್ದುಪಡಿ ತರಲಾಗುವುದು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದರು.

ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲಾ ಘಟಕ ಮತ್ತು ತಾಲ್ಲೂಕು ಘಟಕಗಳಲ್ಲಿ ಹೊಸಬರಿಗೂ ಅವಕಾಶಗಳು ಸಿಗಬೇಕು. ತಾಲ್ಲೂಕು ಘಟಕಗಳ ಅಧ್ಯಕ್ಷ ಸ್ಥಾನಕ್ಕೂ ಚುನಾವಣೆ ನಡೆಸುವ ವ್ಯವಸ್ಥೆ ರೂಪಿಸಬೇಕು. ಡಿ.4ರಂದು ಪ್ರಥಮ ಕಾರ್ಯಕಾರಿಣಿ ಸಭೆ ನಡೆಸಿ, ಈ ಬಗ್ಗೆ ಚರ್ಚಿಸಲಾಗುವುದು. ನಿಬಂಧನೆ ಬದಲಾವಣೆಗೆ ನಿವೃತ್ತ ನ್ಯಾಯಮೂರ್ತಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗುವುದು’ ಎಂದರು.

‘ಕಾರ್ಯಕಾರಿ ಸಮಿತಿಯನ್ನು ಸಶಕ್ತಿಕರಣ ಮಾಡಲಾಗುವುದು. ಈಗ ಇರುವ 49 ಸ್ಥಾನಗಳ ಜೊತೆಗೆ 26 ಸ್ಥಾನಗಳನ್ನು ಸೇರ್ಪಡೆ ಮಾಡಲಾಗುವುದು. ಸದಸ್ಯತ್ವ ಶುಲ್ಕವನ್ನು ₹ 250ಕ್ಕೆ ಇಳಿಕೆ ಮಾಡಿ, ಐದು ವರ್ಷಗಳ ಅವಧಿಯಲ್ಲಿ ಒಂದು ಕೋಟಿ ಜನರನ್ನು ಸದಸ್ಯರನ್ನಾಗಿ ಮಾಡಲಾಗುವುದು. ಶುಲ್ಕ ಇಳಿಕೆ ಬಗ್ಗೆ ಸರ್ವಸದಸ್ಯರ ಸಭೆಯಲ್ಲಿ ನಿರ್ಣಯ ಕೈಗೊಳ್ಳುತ್ತೇನೆ. ಕೇಂದ್ರ ಹಾಗೂ ರಾಜ್ಯ ಸರ್ಕಾರವು ಕನ್ನಡ ವಿರೋಧಿ ನಡೆ ತಾಳಿದರೆ ಹೋರಾಟದ ಜೊತೆಗೆ ಕಾನೂನು ಕ್ರಮಕ್ಕೂ ಮುಂದಾಗುತ್ತೇನೆ. ನಾನು ಯಾವುದೇ ಪಂಥಕ್ಕೆ ಸೇರಿದವನಲ್ಲ’ ಎಂದು ಹೇಳಿದರು.

ADVERTISEMENT

ಮೂಗುತಿ ಉಡುಗೊರೆ ಕೊಟ್ಟವರ ವಿರುದ್ಧ ಕ್ರಮ
‘ಮೂಗುತಿ ಉಡುಗೊರೆ ಕೊಟ್ಟವರ ವಿರುದ್ಧ ಕ್ರಮ ಜರುಗಿಸುವ ಬಗ್ಗೆ ಕಾರ್ಯಕಾರಿಣಿ ಮುಂದೆ ಪ್ರಸ್ತಾವ ಮಂಡಿಸಲಾಗುವುದು’ ಎಂದು ಮಹೇಶ್ ಜೋಶಿ ಹೇಳಿದರು.

‘ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದವರು ಚುನಾವಣೆ ನೀತಿ ಸಂಹಿತೆ ಜಾರಿಯಾದ ಬಳಿಕ ಆದರ್ಶ ದಂಪತಿ ಕಾರ್ಯಕ್ರಮ ನಡೆಸಿ, ಮೂಗುತಿ ಸೇರಿದಂತೆ ಕೆಲವೊಂದು ಉಡುಗೊರೆ ನೀಡಿದರು.ಇದಕ್ಕೆ ಸಾಹಿತ್ಯ ಪರಿಷತ್ತಿನ ಲಾಂಛನವನ್ನೂ ಬಳಸಿಕೊಂಡಿದ್ದರು. ಕಸಾಪ ನಿಬಂಧನೆಗಳ ವಿರುದ್ಧ ನಡೆದುಕೊಂಡವರನ್ನು ಮೂರು ವರ್ಷ ಅಮಾನತು ಮಾಡುವ ಬಗ್ಗೆ ಕಾರ್ಯಕಾರಿಣಿಯಲ್ಲಿ ಪ್ರಸ್ತಾಪಿಸಲಾಗುವುದು’ ಎಂದರು.

ಮಹೇಶ ಜೋಶಿ ಅಧಿಕಾರ ಸ್ವೀಕಾರ
ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) 26ನೇ ಅಧ್ಯಕ್ಷರಾಗಿ ಮಹೇಶ ಜೋಶಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಆಡಳಿತಾಧಿಕಾರಿ ಎಸ್. ರಂಗಪ್ಪ ಅವರು ಕನ್ನಡದ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್, ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್ ಇದ್ದರು.

ಜಾನಪದ ಕಲಾ ತಂಡಗಳು ನೂತನ ಅಧ್ಯಕ್ಷರನ್ನು ಬರಮಾಡಿಕೊಂಡವು. ಪರಿಷತ್ತಿನ ಆವರಣವು ಕನ್ನಡ ಧ್ವಜಗಳಿಂದ ರಾರಾಜಿಸಿದವು.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ದೊಡ್ಡರಂಗೇಗೌಡ, ಕಸಾಪ ಮಾಜಿ ಅಧ್ಯಕ್ಷರಾದಹಂ.ಪ. ನಾಗರಾಜಯ್ಯ, ನಲ್ಲೂರು ಪ್ರಸಾದ್, ವಿಮರ್ಶಕ ಕೆ.ಎಸ್. ಭಗವಾನ್, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ,ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖರು ಸಮಾರಂಭದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.