ADVERTISEMENT

ಕಣ್ವ ಸೊಸೈಟಿ; ಬಂಧಿತ ಸಂಸ್ಥಾಪಕನೂ ‘ಸಾಲಗಾರ’

ವಂಚನೆ ಪ್ರಕರಣದ ತನಿಖೆ ಚುರುಕು l 80 ಮಂದಿ ದೂರು

ಸಂತೋಷ ಜಿಗಳಿಕೊಪ್ಪ
Published 7 ನವೆಂಬರ್ 2019, 20:17 IST
Last Updated 7 ನವೆಂಬರ್ 2019, 20:17 IST
ನಂಜುಂಡಯ್ಯ
ನಂಜುಂಡಯ್ಯ   

ಬೆಂಗಳೂರು: ಕಣ್ವ ಸಮೂಹ ಸಂಸ್ಥೆಯ ಶ್ರೀ ಕಣ್ವ ಸೌಹಾರ್ದ ಕೋ–ಆಪರೇಟಿವ್ ಸೊಸೈಟಿ ವಿರುದ್ಧ ದಾಖಲಾಗಿರುವ ವಂಚನೆ ಪ್ರಕರಣದತನಿಖೆ ಚುರುಕು ಗೊಂಡಿದ್ದು, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಸಂಸ್ಥಾಪಕ ಎನ್‌. ನಂಜುಂಡಯ್ಯ ಅವರೇ ತಮ್ಮ ಸೊಸೈಟಿಯಿಂದ ಸಾಲ ಪಡೆದಿರುವ ಸಂಗತಿ ತನಿಖೆಯಿಂದ ಗೊತ್ತಾಗಿದೆ.

‘ಸೊಸೈಟಿಯ ಮೂವರು ಸದಸ್ಯರು ನೀಡಿರುವ ದೂರು ಆಧರಿಸಿ ಬಸವೇಶ್ವರನಗರ ಠಾಣೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಸೊಸೈಟಿಯ ಸದಸ್ಯರು ಹಾಗೂ ಸಾಲಗಾರರ ಪಟ್ಟಿಯನ್ನೂ ಪರಿಶೀಲಿಸುತ್ತಿದ್ದಾರೆ. ಅದರಲ್ಲೇ ನಂಜುಂಡಯ್ಯ ಅವರ ಹೆಸರು ಇದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಕಣ್ವ ಸಮೂಹ ಸಂಸ್ಥೆ ಸ್ಥಾಪಿಸಿದ್ದ ನಂಜುಂಡಯ್ಯ ಅವರು ಗಾರ್ಮೆಂಟ್ಸ್‌, ರಿಯಲ್ ಎಸ್ಟೇಟ್, ಆರೋಗ್ಯ ಕ್ಷೇತ್ರ ಹೀಗೆ ಹಲವು ರಂಗಗಳಲ್ಲಿ ಬಂಡವಾಳ ಹೂಡಿದ್ದರು. ಉತ್ತಮ ವ್ಯವಹಾರ ನಡೆಸಿ ಆಸ್ತಿಯನ್ನೂ ಸಂಪಾದಿಸಿದ್ದರು. ಅದರ ಮಧ್ಯೆಯೇಶ್ರೀ ಕಣ್ವ ಸೌಹಾರ್ದ ಕೋ–ಆಪರೇಟಿವ್ ಸೊಸೈಟಿ ಸ್ಥಾಪಿಸಿ, ಅದರ ಗೌರವ ಅಧ್ಯಕ್ಷರಾಗಿದ್ದರು.’

ADVERTISEMENT

‘ಸಂಸ್ಥೆಯ ಬೆಳವಣಿಗೆಗಾಗಿ ಮತ್ತಷ್ಟು ಹೂಡಿಕೆ ಮಾಡಲು ಮುಂದಾಗಿದ್ದ ನಂಜುಂಡಯ್ಯ, ಸೊಸೈಟಿಯಿಂದಲೇ ಸಾಲ ಪಡೆಯಲು ಯೋಚಿಸಿದ್ದರು. ಕಣ್ವ ಸಮೂಹ ಸಂಸ್ಥೆಗೆ ಸೇರಿದ್ದ ಸುಮಾರು ₹ 170 ಕೋಟಿ ಮೌಲ್ಯದ ಆಸ್ತಿ ದಾಖಲೆಗಳನ್ನು ಅಡವಿಟ್ಟು ಸೊಸೈಟಿಯಲ್ಲೇ ಸಾಲ ಪಡೆದಿರುವ ಮಾಹಿತಿ ಸಿಕ್ಕಿದೆ. ಸಾಲದ ಮೊತ್ತ ಎಷ್ಟು ಎಂಬುದು ದಾಖಲೆಗಳ ಪರಿಶೀಲನೆಯಿಂದ ತಿಳಿಯಬೇಕಿದೆ’ ಎಂದು ಹಿರಿಯ ಅಧಿಕಾರಿ ವಿವರಿಸಿದರು.

ಬಟ್ಟೆ ಮಾರಾಟದಲ್ಲಿ ನಷ್ಟ: ‘ರಾಜ್ಯದಾದ್ಯಂತ 50ಕ್ಕೂ ಹೆಚ್ಚು ಕಣ್ವ ಮಾರ್ಟ್ ಮಳಿಗೆಗಳಿವೆ. ಇಲ್ಲಿ ಪ್ರತಿವರ್ಷ ದೀಪಾವಳಿಗೂ ಮುನ್ನ ₹ 20 ಕೋಟಿ ವಹಿವಾಟು ಆಗುತ್ತಿತ್ತು. ಆರ್ಥಿಕ ಹಿಂಜರಿತದಿಂದಾಗಿ ಎರಡು ವರ್ಷಗಳಿಂದ ₹ 6 ಕೋಟಿ ವಹಿವಾಟು ಮಾತ್ರ ಆಗಿದೆ’ ಎಂದು ಹಿರಿಯ ಅಧಿಕಾರಿ ಹೇಳಿದರು.

‘ಬಟ್ಟೆ ವ್ಯಾಪಾರದಿಂದ ಸಂಸ್ಥೆಗೆ ಉತ್ತಮ ಲಾಭ ಬರುತ್ತಿತ್ತು. ಬಟ್ಟೆಗಳೇ ಮಾರಾಟ ಆಗದಿದ್ದರಿಂದ ನಷ್ಟ ಉಂಟಾಯಿತು. ಇದು ಸೊಸೈಟಿ ಮೇಲೂ ಪರಿಣಾಮ ಬೀರಿತು. ಸಂಸ್ಥೆಯ ಸುಮಾರು 3,000 ಉದ್ಯೋಗಿಗಳಿಗೆ ವೇತನ ನೀಡುವುದು ಕಷ್ಟವಾಯಿತು. ಈ ಬಗ್ಗೆ ನಂಜುಂಡಯ್ಯ ಅವರೇ ಹೇಳಿಕೆ ನೀಡಿದ್ದಾರೆ’ ಎಂದು ಅಧಿಕಾರಿ ವಿವರಿಸಿದರು.

80 ದೂರು: ‘ವಂಚನೆ ಸಂಬಂಧ ಆರಂಭದಲ್ಲಿ ಮೂವರು ಮಾತ್ರ ದೂರು ನೀಡಿದ್ದರು. ನ. 7ರವರೆಗೆ 80 ಮಂದಿ ದೂರು ನೀಡಿದ್ದಾರೆ’ ಎಂದು ಅಧಿಕಾರಿ ಹೇಳಿದರು.

‘ದೂರು ನೀಡಿರುವವರೆಲ್ಲರೂ ಸೊಸೈಟಿಯಲ್ಲಿ ನಿಶ್ಚಿತ ಠೇವಣಿ ಇಟ್ಟಿದ್ದಾರೆ. ಆ ಪೈಕಿ ಹಲವರ ಠೇವಣಿ ಅವಧಿ ಮುಕ್ತಾಯಗೊಂಡಿದ್ದು, ಅವರಿಗೆ ಇದುವರೆಗೂ ಅಸಲು ಹಾಗೂ ಬಡ್ಡಿ ಹಣ ವಾಪಸು ಕೊಟ್ಟಿಲ್ಲ’ ಎಂದರು.

ಆಸ್ತಿ ಬಗ್ಗೆ ಮಾಹಿತಿ ಸಂಗ್ರಹ: ‘ಕಣ್ವ ಸಮೂಹ ಸಂಸ್ಥೆ ಹೆಸರಿನಲ್ಲಿ ಬೆಂಗಳೂರು ಹಾಗೂ ಹೊರ ಜಿಲ್ಲೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಸ್ತಿ ಇರುವುದಾಗಿ ಸೊಸೈಟಿ ನಿರ್ದೇಶಕರೇ ಹೇಳುತ್ತಿದ್ದಾರೆ. ಯಾವ ಆಸ್ತಿ ಎಲ್ಲಿದೆ ಎಂಬುದರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ’ ಎಂದು ಹೇಳಿದರು.

‘ಸೊಸೈಟಿ ನೋಂದಣಿ ಬಗ್ಗೆ ಸಹಕಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅದನ್ನು ನ್ಯಾಯಾಲಯದ ಗಮನಕ್ಕೆ ತಂದು ಅದರ ನಿರ್ದೇಶನದಂತೆ ಮುಂದುವರಿಯಲಾಗುವುದು’ ಎಂದು ಅಧಿಕಾರಿ ತಿಳಿಸಿದರು.

ಷರತ್ತುಬದ್ಧ ಜಾಮೀನು
ನ್ಯಾಯಾಂಗ ಬಂಧನದಲ್ಲಿದ್ದ ನಂಜುಂಡಯ್ಯ ಅವರಿಗೆ ನಗರದ 5ನೇ ಎಸಿಎಂಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.

‘ವಾರಕ್ಕೊಮ್ಮೆ ತನಿಖಾಧಿಕಾರಿ ಎದುರು ಹಾಜರಾಗಬೇಕು. ತನಿಖೆಗೆ ಸಹಕರಿಸಬೇಕು ಸೇರಿದಂತೆ ಹಲವು ಷರತ್ತು ವಿಧಿಸಲಾಗಿದೆ’ ಎಂದು ಕಣ್ವ ಸಮೂಹ ಸಂಸ್ಥೆ ಕಾನೂನು ಸಲಹೆಗಾರ ಆರ್. ಮೋಹನ್ ಹೇಳಿದರು. ಆರೋಪಿಯನ್ನು ಕಸ್ಟಡಿ ನೀಡುವಂತೆ ಕೋರಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.