ಬೆಂಗಳೂರಿನಲ್ಲಿ ಮಂಗಳವಾರ ‘ಕರ್ನಾಟಕ ಅರಣ್ಯ ವನ್ಯಜೀವಿ ಮತ್ತು ಹವಾಮಾನ ಬದಲಾವಣೆ ಪ್ರತಿಷ್ಠಾನ’ ಆಯೋಜಿಸಿದ್ದ ಅರಣ್ಯ ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆ ಉತ್ತೇಜಿಸಲು ಪಾಲುದಾರರ ಪ್ರಥಮ ಸಮ್ಮೇಳನದಲ್ಲಿ (ಎಡದಿಂದ) ಸ್ಮಿತಾ ಬಿಜ್ಜೂರ್,
ಬೆಂಗಳೂರು: ರಾಜ್ಯದಲ್ಲಿ ಹುಲಿ ಯೋಜನೆಗಳು, ಮೃಗಾಲಯ ಸಹಿತ ಕೆಲವೇ ವಿಭಾಗಗಳಿಗೆ ಸೀಮಿತವಾಗಿದ್ದ ಕಾರ್ಪೊರೇಟ್ ಸಹಭಾಗಿತ್ವವು ಇನ್ನು ಮುಂದೆ ಅರಣ್ಯ ಇಲಾಖೆಯ ಎಲ್ಲಾ ವಿಭಾಗಗಳಿಗೂ ವಿಸ್ತರಣೆಯಾಗಲಿದೆ. ಇದಕ್ಕಾಗಿ 'ಕರ್ನಾಟಕ ಅರಣ್ಯ, ವನ್ಯಜೀವಿ ಮತ್ತು ಹವಾಮಾನ ಬದಲಾವಣೆ ಪ್ರತಿಷ್ಠಾನ’ ಆರಂಭಿಸಲಾಗಿದೆ.
ವನ್ಯಜೀವಿಗಳ ಸಂರಕ್ಷಣೆ, ಮಾನವ ವನ್ಯಜೀವಿ ಸಂಘರ್ಷ ತಡೆ, ಜಲ ಸಂರಕ್ಷಣೆ, ಮರಗಳ ರಕ್ಷಣೆ, ಪರಿಸರ ಸಮತೋಲನ, ಅರಣ್ಯ ಸಂಶೋಧನಾ ಕ್ಷೇತ್ರಗಳ ಕಾರ್ಯಗಳಿಗೆ ಉದ್ಯಮಿಗಳು ಹಾಗೂ ಆಸಕ್ತರು ಆರ್ಥಿಕ ನೆರವು ನೀಡಬಹುದು. ಯೋಜನೆಗಳ ಅನುಷ್ಠಾನ ಹೊಣೆಯನ್ನೂ ಪಡೆಯಬಹುದು.
ಬೆಂಗಳೂರಿನಲ್ಲಿ ಮಂಗಳವಾರ ನಡೆದ ಉದ್ಯಮ ವಲಯದ ಪ್ರತಿನಿಧಿಗಳು, ಅರಣ್ಯ, ಪರಿಸರ ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಥಮ ಸಮ್ಮೇಳನದಲ್ಲಿ ಪ್ರತಿಷ್ಠಾನದ ರೂಪುರೇಷೆಗಳು, ಉದ್ಯಮಿಗಳ ಸಹಭಾಗಿತ್ವದ ಸ್ವರೂಪ, ಹೂಡಿಕೆಯ ಕುರಿತು ವಿಸ್ತೃತವಾಗಿ ಚರ್ಚೆಗಳು ನಡೆದವು.
ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಅರಣ್ಯ ಇಲಾಖೆಯೇ ಸದ್ಯ ಫೌಂಡೇಷನ್ ಆರಂಭಿಸಿ ಹಣಕಾಸು ಬಳಕೆ ಮಾಡುತ್ತಿದೆ. ಆದರೆ ಇತರೆ ವಿಭಾಗಗಳು ಇಲಾಖೆಯ ವಾರ್ಷಿಕ ಅನುದಾನವನ್ನೇ ನಂಬಿಕೊಳ್ಳಬೇಕಾಗಿತ್ತು. ಈಗ ವನ್ಯಜೀವಿ ಜತೆಗೆ ಹವಾಮಾನ ವೈಪರೀತ್ಯದ ಅಂಶದೊಂದಿಗೆ ಫೌಂಡೇಷನ್ ಆರಂಭಿಸಿ ಆರ್ಥಿಕ ನೆರವು ಪಡೆಯಲಾಗುತ್ತದೆ.
ಸಮ್ಮೇಳನಕ್ಕೆ ಚಾಲನೆ ನೀಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ಹೂಡಿಕೆಯ ಅಗತ್ಯವನ್ನು ಒತ್ತಿ ಹೇಳಿದರು. ಅರಣ್ಯ ಇಲಾಖೆ ರಾಯಭಾರಿ ಅನಿಲ್ ಕುಂಬ್ಳೆ, ಲೇಖಕಿ ರೋಹಿಣಿ ನಿಲೇಕಣಿ, ಗಾಯಕ ರಿಕಿ ಕೇಜ್, ಉದ್ಯಮಿ ಪ್ರಶಾಂತ್ ಪ್ರಕಾಶ್ ಭಾಗವಹಿಸಿದ್ದರು.
ಅರಣ್ಯ ಸಚಿವರ ಅಧ್ಯಕ್ಷತೆಯಲ್ಲಿ ಮುಖ್ಯ ಸಮಿತಿ ರಚಿಸಿದ್ದು, ಯೋಜನೆಗಳಿಗೆ ಸಮಿತಿ ಒಪ್ಪಿಗೆ ನೀಡಲಿದೆ. ಅಧಿಕಾರಿಗಳ ನೇತೃತ್ವದ ಕಾರ್ಯನಿರ್ವಾಹಕ ಸಮಿತಿ ಯೋಜನೆ ಅಂತಿಮಗೊಳಿಸಲಿದೆ. ಸಿಎಸ್‌ಆರ್ ಘಟಕವು ಪ್ರಕ್ರಿಯೆ ನಡೆಸಲಿದೆ ಎಂದು ಅರಣ್ಯ ಪಡೆಗಳ ಮುಖ್ಯಸ್ಥರಾದ ಮೀನಾಕ್ಷಿ ನೇಗಿ ವಿವರಿಸಿದರು.
ಅರಣ್ಯ ಇಲಾಖೆಯ ಯೋಜನೆ, ಕಟ್ಟಡ ನಿರ್ಮಾಣ, ಸಿಬ್ಬಂದಿಗೆ ಸೌಲಭ್ಯ, ಸಂಶೋಧನೆ ಸಹಿತ ನಾನಾ ಚಟುವಟಿಕೆಗಳಿಗೆ ಎಷ್ಟು ನೆರವಾದರೂ ನೆರವು ನೀಡಬಹುದು ಎಂದು ಫೌಂಡೇಷನ್ ಮುಖ್ಯಸ್ಥರಾಗಿರುವ ಪಿಸಿಸಿಎಫ್(ಇಡಬ್ಲುಪಿಆರ್‌ಟಿ) ಬಿ.ಪಿ.ರವಿ ಹೇಳಿದರು.
ವನ್ಯಜೀವಿ ವಿಭಾಗಗಳಲ್ಲಿನ ಸಹಭಾಗಿತ್ವ ಕುರಿತು ಪಿಸಿಸಿಎಫ್( ವನ್ಯಜೀವಿ) ಪ್ರಭಾತ್ ಚಂದ್ರ ರೇ, ಹವಾಮಾನ ವೈಪರೀತ್ಯ ತಡೆ ಕಾರ್ಯಕ್ರಮಗಳ ಕುರಿತು ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿಜಯಮೋಹನ್‌ರಾಜ್ ವಿವರ ನೀಡಿದರು.
ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯಿಂದ ಆಗುತ್ತಿರುವ ಪರಿಣಾಮಗಳನ್ನು ಎದುರಿಸಲು ಹಸಿರು ಹೊದಿಕೆಯ ಹೆಚ್ಚಳವೊಂದೇ ಪರಿಹಾರ. ಉದ್ಯಮ ವಲಯವೂ ಇಲಾಖೆ ಜತೆ ಕೈ ಜೋಡಿಸಬೇಕು-ಈಶ್ವರ ಖಂಡ್ರೆ ಅರಣ್ಯ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.