ADVERTISEMENT

ಅಪಹರಣಕ್ಕೀಡಾಗಿದ್ದ ಮಗು 48 ಗಂಟೆಗಳಲ್ಲಿ ಪತ್ತೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 19:34 IST
Last Updated 2 ಮಾರ್ಚ್ 2020, 19:34 IST

ಬೆಂಗಳೂರು: ಮನೆ ಮುಂದೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಅಪಹರಣ ಆಗಿದ್ದ ಮೂರು ವರ್ಷದ ಮಗುವನ್ನು ಕೇವಲ 48 ಗಂಟೆಗಳಲ್ಲಿ ವಿದ್ಯಾರಣ್ಯಪುರ ಪೊಲೀಸರು ರಕ್ಷಿಸಿ, ಪೋಷಕರ ಮಡಿಲು ಸೇರಿಸುವಲ್ಲಿ ಯಶಸ್ವಿ ಆಗಿದ್ದಾರೆ.

ಮಗುವನ್ನು ಅಪಹರಿಸಿದ್ದ ದುಷ್ಕರ್ಮಿಗಳು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಉತ್ತರಕರ್ನಾಟಕದ ಬಸವರಾಜ್– ಲಕ್ಷ್ಮಿ ದಂಪತಿ ವಿದ್ಯಾರಣ್ಯಪುರದ ಸಮೀಪದ ಸಿಂಗಾಪುರದ ಹೊಸಬಾಳು ನಗರದಲ್ಲಿ ವಾಸಿಸುತ್ತಿದ್ದು, ಗಾರೆ ಕೆಲಸ ಮಾಡಿಕೊಂಡಿದ್ದಾರೆ. ಫೆ. 29ರಂದು ಬೆಳಿಗ್ಗೆ ಮನೆ ಮುಂಭಾಗದಲ್ಲಿ ಆಟವಾಡುತ್ತಿದ್ದಾಗ ದಂಪತಿಯ ಮೂರು ವರ್ಷದ ಮಗ ಅರ್ಜುನ್ ನಾಪತ್ತೆಯಾಗಿದ್ದ. ಪೋಷಕರು ಎಲ್ಲ ಕಡೆ ಹುಡುಕಾಡಿದರೂ ಮಗು ಸಿಕ್ಕಿರಲಿಲ್ಲ. ಹೀಗಾಗಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.

ADVERTISEMENT

ಪ್ರಕರಣ ದಾಖಲಿಸಿಕೊಂಡು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಇನ್‌ಸ್ಪೆಕ್ಟರ್‌ ಟಿ.ಎಲ್‌. ಪ್ರವೀಣ್ ಕುಮಾರ್ ನೇತೃತ್ವದ ತಂಡ, ದುಷ್ಕರ್ಮಿಗಳ ಜಾಡು ಪತ್ತೆ ಹಚ್ಚಿತ್ತು. ಪೊಲೀಸರು ಬೆನ್ನುಬಿದ್ದ ಮಾಹಿತಿ ಸಿಕ್ಕಿದ ದುಷ್ಕರ್ಮಿಗಳು, ಮಲ್ಲೇಶ್ವರದಲ್ಲಿರುವ ಕಾರ್ಮಿಕ ದಂಪತಿ ಬಳಿ ಮಗುವನ್ನು ಬಿಟ್ಟು ಪರಾರಿಯಾಗಿದ್ದರು. ತಲೆಮರೆಸಿಕೊಂಡಿರುವ ದುಷ್ಕರ್ಮಿಗಳ ಸುಳಿವು ಸಿಕ್ಕಿದ್ದು, ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.