ADVERTISEMENT

ಒಂದೇ ಕಿಡ್ನಿ ಇಬ್ಬರಿಗೆ ಕಸಿ; ವೈದ್ಯ ಲೋಕಕ್ಕೆ ಸವಾಲು

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2018, 19:09 IST
Last Updated 11 ನವೆಂಬರ್ 2018, 19:09 IST

ಬೆಂಗಳೂರು: ಒಂದೇ ಕಿಡ್ನಿಯನ್ನು ಇಬ್ಬರಿಗೆ ಕಸಿ ಮಾಡಿದ ಅಪರೂಪದ ಘಟನೆ ನಗರದಲ್ಲಿ ನಡೆದಿದೆ.

ಬಿಜಿಎಸ್ ಗ್ಲೋಬಲ್‌ ಆಸ್ಪತ್ರೆಯ ವೈದ್ಯರು 2010ರ ಜೂನ್‌ 14ರಂದು 53 ವರ್ಷದ ವ್ಯಕ್ತಿಯೊಬ್ಬರಿಗೆ, ಅವರ 63 ವರ್ಷದ ಸಹೋದರನಿಂದ ದಾನ ಪಡೆದ ಕಿಡ್ನಿಯನ್ನು ಕಸಿ ಮಾಡಿದ್ದರು. ಕಿಡ್ನಿ ಸಮಸ್ಯೆಯಿಂದ ಸಾಕಷ್ಟು ವರ್ಷ ನೋವು ಅನುಭವಿಸಿದ್ದ ಅವರು, ಶಸ್ತ್ರಚಿಕಿತ್ಸೆ ಬಳಿಕ ಓಡಾಡುವಷ್ಟು ಚೇತರಿಸಿಕೊಂಡಿದ್ದರು. ಬೈಕ್‌ನಲ್ಲಿ ಹತ್ತಾರು ಕಿ.ಮೀ ಪ್ರಯಾಣ ಮಾಡಿದರು. ಆದರೆ, ಅವರ ಅದೃಷ್ಟ ಮತ್ತೆ ಕೈಕೊಟ್ಟಿತು. ಮನೆಯ ಸಮೀಪ ಬೈಕ್‌ನಲ್ಲಿ ಬರುತ್ತಿದ್ದಾಗ ಅಪಘಾತಕ್ಕೀಡಾದರು. ಗಾಯಗೊಂಡು ಬಿದ್ದಿದ್ದ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲು ಮಾಡಿದರು.

‘ಹೃದಯಾಘಾತವಾಗಿದೆ. ಮಿದುಳು ನಿಷ್ಕ್ರಿಯಗೊಂಡಿದೆ’ ಎಂದು ವೈದ್ಯರು ಘೋಷಿಸಿದಾಗ ಇಡೀ ಕುಟುಂಬ ಮರುಗಿತು. ಆದರೂ ಧೈರ್ಯಗೆಡದ ಕುಟುಂಬಸ್ಥರು ಮಹತ್ವದ ನಿರ್ಧಾರ ಕೈಗೊಂಡರು. ತಮ್ಮವರಿಗೆ ದಾನವಾಗಿ ಸಿಕ್ಕಿದ್ದ ಕಿಡ್ನಿಯನ್ನು ಬೇರೊಬ್ಬರಿಗೆ ದಾನ ಮಾಡಲು ಮುಂದಾದರು.

ADVERTISEMENT

ಇದಕ್ಕಾಗಿ ವೈದ್ಯರು ಸಂಪೂರ್ಣ ತಯಾರಿ ಮಾಡಿಕೊಳ್ಳಬೇಕಿತ್ತು. ಏಕೆಂದರೆ ಕಿಡ್ನಿ ಕಸಿ ಮಾಡಿದ್ದು 2010ರಲ್ಲಿ. ಆಗಲೇ ದಾನ ಪಡೆದ ಕಿಡ್ನಿಗೆ 63 ವರ್ಷ ವಯಸ್ಸಾಗಿತ್ತು. 2018ರ ಜೂನ್ (ಅಪಘಾತವಾದ ಸಂದರ್ಭ) ಹೊತ್ತಿಗೆ ಕಿಡ್ನಿಗೆ 71 ವರ್ಷ ವಯಸ್ಸಾಗಿತ್ತು. ಸಾಮಾನ್ಯವಾಗಿ ಕಸಿ ಮಾಡಿದ ಕಿಡ್ನಿ 10 ವರ್ಷ ಮಾತ್ರ ಕೆಲಸ ಮಾಡುತ್ತದೆ. ಈ ಕಸಿ ಯಶಸ್ವಿಯಾದರೆ ವೈದ್ಯಲೋಕದಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪನೆ ಆಗಲಿದೆ ಎಂದು ತಿಳಿದ ವೈದ್ಯರು ಹೊಸ ಸವಾಲಿಗೆ ಸಜ್ಜಾದರು.

‘ಒಮ್ಮೆ ಶಸ್ತ್ರಚಿಕಿತ್ಸೆ ಮಾಡಿದ ಕಿಡ್ನಿಯನ್ನು ಮತ್ತೆ ಹೊರತೆಗೆಯುವುದು ಕೂಡ ಸವಾಲಿನ ಕೆಲಸ. ಕಿಡ್ನಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದುದನ್ನು ಖಚಿತಪಡಿಸಿಕೊಂಡ ಬಳಿಕ, 65 ವರ್ಷದ ಅವಿನಾಶ್ ಎಂಬುವವರಿಗೆ ಕಸಿ ಮಾಡಲಾಗಿದೆ. ಈಗ ಅವರು ಆರೋಗ್ಯವಾಗಿದ್ದಾರೆ’ ಎಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡದ ಮುಖ್ಯಸ್ಥ ಡಾ. ಎಸ್‌.ನರೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.