ADVERTISEMENT

ಸಂವಿಧಾನ ರಕ್ಷಿಸಿದರೆ ಬದುಕಲು ಸಾಧ್ಯ: ಸಚಿವ ಮಹದೇವಪ್ಪ

ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ ಅಭಿಮತ | ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 2 ಮೇ 2025, 17:17 IST
Last Updated 2 ಮೇ 2025, 17:17 IST
ಬಿ.ಅರ್‌.ಅಂಬೇಡ್ಕರ್‌ ಅವರ ಜಯಂತ್ಯುತ್ಸವದಲ್ಲಿ ಎಚ್‌.ಸಿ.ಮಹದೇವಪ್ಪ ಮಾತನಾಡಿದರು
ಬಿ.ಅರ್‌.ಅಂಬೇಡ್ಕರ್‌ ಅವರ ಜಯಂತ್ಯುತ್ಸವದಲ್ಲಿ ಎಚ್‌.ಸಿ.ಮಹದೇವಪ್ಪ ಮಾತನಾಡಿದರು   

ಬೆಂಗಳೂರು: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ರಕ್ಷಣೆ ಮಾಡಿದರೆ ಮಾತ್ರ ಬದುಕಲು ಸಾಧ್ಯ. ಸಂವಿಧಾನ ಬದಲಾಯಿಸಲು ಹೋರಾಟ ಮಾಡಿದವರು, ಅದೇ ಸಂವಿಧಾನ ಗ್ರಂಥವನ್ನು ಹಿಡಿದು ನಮಸ್ಕರಿಸುತ್ತಿದ್ದಾರೆ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕ್ಷೇಮಾಭಿವೃದ್ಧಿ ಸಂಘವು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಿ.ಅರ್‌.ಅಂಬೇಡ್ಕರ್‌ ಅವರ ಜಯಂತ್ಯುತ್ಸವದಲ್ಲಿ ಭಾಗವಹಿಸಿ, ಮಾತನಾಡಿದರು. 

‘ನಾವು ಸ್ವಾಭಿಮಾನದಿಂದ ಬದಕಲು ಅಂಬೇಡ್ಕರ್‌ ಅವರು ಸಂವಿಧಾನ ನೀಡಿದ್ದಾರೆ. ಹಿಂದೂ ಧರ್ಮದ ಸುಧಾರಣೆಗೆ ಸಾಕಷ್ಟು ಪ್ರಯತ್ನಗಳನ್ನು ಅವರು ಮಾಡಿದ್ದರು. ಅಸ್ಪೃಶ್ಯತೆ ಹಾಗೂ ಶ್ರೇಣಿಕೃತ ಜಾತಿ ವ್ಯವಸ್ಥೆ ಹೋಗಲಾಡಿಸಲು ಶ್ರಮಿಸಿದ್ದರು. ಶಿಕ್ಷಣ, ಸಂಘಟನೆ ಹಾಗೂ ಹೋರಾಟಕ್ಕೆ ಬುನಾದಿ ಹಾಕಿಕೊಟ್ಟಿದ್ದರು. ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು’ ಎಂದರು.

ADVERTISEMENT

‘ರಾಜ್ಯದಲ್ಲಿ ಆರೋಗ್ಯ ಕ್ಷೇತ್ರ ದೊಡ್ಡ ಮಟ್ಟದಲ್ಲಿ ಸುಧಾರಣೆ ಕಂಡಿದೆ. ಕ್ಯಾನ್ಸರ್‌ ಎಂದೊಂಡನೆ ಜೀವನವೇ ಅಂತ್ಯ ಎಂಬ ಭಾವನೆ ಮೂಡುವುದು ಸಹಜ. ಆದರೆ, ವೈದ್ಯಕೀಯ ಕ್ಷೇತ್ರದ ಆವಿಷ್ಕಾರಗಳಿಂದ ಚಿಕಿತ್ಸೆಯ ಮೂಲಕ ರೋಗವನ್ನು ವಾಸಿ ಮಾಡಲಾಗುತ್ತಿದೆ. ಕ್ಯಾನ್ಸರ್‌ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವಲ್ಲಿ ಕಿದ್ವಾಯಿ ಸಂಸ್ಥೆ ಮುಂಚೂಣಿಯಲ್ಲಿದೆ’ ಎಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಅರವಿಂದಕುಮಾರ ಅರಳಿ, ‘ಶಿಕ್ಷಣದಿಂದ ಮಾತ್ರ ಸಂಸ್ಕಾರ ಬರಲು ಸಾಧ್ಯ. ಇತ್ತೀಚೆಗೆ ಶಿಕ್ಷಣಕ್ಕಿಂತ ಸಂಘಟನೆಗೆ ಒತ್ತು ನೀಡುತ್ತಿರುವುದು ಬೇಸರದ ಸಂಗತಿ. ಅಖಂಡ ಭಾರತ ನಿರ್ಮಾಣಕ್ಕೆ ಸಂವಿಧಾನವೇ ಬುನಾದಿ. ಮುಂದಿನ ದಿನಗಳಲ್ಲಿ ಅಂಬೇಡ್ಕರ್‌ ದಿನಾಚರಣೆಯನ್ನು ರಾಜ್ಯದಲ್ಲಿ ಜ್ಞಾನದ ದಿನವನ್ನಾಗಿ ಆಚರಣೆ ಮಾಡಬೇಕು’ ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಸಂಸ್ಥೆಯ ಆಡಳಿತಾಧಿಕಾರಿ ಡಾ.ವೈ. ನವೀನ್‌ ಭಟ್‌, ‘ಅಂಬೇಡ್ಕರ್‌ ಅವರ ಬಗ್ಗೆ ತಿಳಿದುಕೊಳ್ಳುವ ಹಸಿವು ಎಲ್ಲರಲ್ಲೂ ಇರಬೇಕು. ಪ್ರತಿ ವರ್ಷವೂ ಅಂಬೇಡ್ಕರ್‌ ಜಯಂತಿ ಆಚರಣೆ ಮಾಡುವ ಮೂಲಕ ನಮ್ಮಲ್ಲಿ ಧನಾತ್ಮಕ ಬದಲಾವಣೆ ಕಂಡುಕೊಳ್ಳಬೇಕು. ಆಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮರಾಗಿ ಬದುಕಲು ಸಾಧ್ಯ’ ಎಂದರು. 

ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಸಂಸ್ಥೆಯ ನಿರ್ದೇಶಕ ಡಾ.ಟಿ.ನವೀನ್‌, ಅಕ್ಕ ಐಎಎಸ್‌ ಅಕಾಡೆಮಿ ಸಂಸ್ಥಾಪಕ ಶಿವಕುಮಾರ್‌ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.