ADVERTISEMENT

ರಸ್ತೆ ಮೇಲೆ ಕೊಳಚೆ ನೀರು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2018, 19:45 IST
Last Updated 7 ಆಗಸ್ಟ್ 2018, 19:45 IST

ಬೆಂಗಳೂರು: ಕಲ್ಕೆರೆ ಕೆರೆಯಿಂದ ರಾಂಪುರ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ಒತ್ತುವರಿಯಿಂದ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ವಾಹನ ಸವಾರರಿಗೆ ತೊಂದರೆಯಾಗಿದೆ.

ನಗರದ ಆರ್.ಟಿ.ನಗರ, ನಾಗವಾರ, ಹೆಣ್ಣೂರು, ಹೆಬ್ಬಾಳ ಮತ್ತು ಸುತ್ತಮುತ್ತಲ ಪ್ರದೇಶಗಳಿಂದ ಹರಿದು ಬರುವ ಕೊಳಚೆ ನೀರು ಹೊರಮಾವು ಆಗರ, ಕಲ್ಕೆರೆ ಕೆರೆಯ ರಾಜಕಾಲುವೆ ಮುಖೇನ ರಾಂಪುರ ಕೆರೆ ಒಡಲಿಗೆ ಸೇರುತ್ತಿದೆ. ಇದೇ ನೀರು ಎಲೆ
ಮಲ್ಲಪ್ಪಶೆಟ್ಟಿ ಕೆರೆಗೆ ಹರಿದು ಹೋಗುತ್ತಿದೆ.

ಕಲ್ಕೆರೆ ಕೆರೆಯಿಂದ ರಾಂಪುರ ಕೆರೆಗೆ ಹಾದುಹೋಗುವ ರಾಜಕಾಲುವೆಯನ್ನು ಸುಮಾರು ₹2.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ರಾಜಕಾಲುವೆಯ ಆಸುಪಾಸಿನಲ್ಲಿನ ಜಮೀನಿನ ಮಾಲೀಕರು ಕಟ್ಟಡದ ತ್ಯಾಜ್ಯವನ್ನು ಇಲ್ಲಿ ಸುರಿಯುತ್ತಿದ್ದಾರೆ. ನಿತ್ಯ, 50ಕ್ಕೂ ಹೆಚ್ಚು ಲಾರಿ ಮತ್ತು ಟ್ರ್ಯಾಕ್ಟರ್‌ಗಳ ಮೂಲಕ ನಗರದ ವಿವಿಧ ಭಾಗಗಳಿಂದ ಕಟ್ಟಡದ ತ್ಯಾಜ್ಯವನ್ನು ತಂದು ಇಲ್ಲಿಸುರಿಯಲಾಗುತ್ತಿದೆ.

ADVERTISEMENT

ಕಳೆದ ವರ್ಷ ದಾಖಲೆಯ ಮಳೆಯಿಂದಾಗಿ ಈ ರಾಜಕಾಲುವೆಯ ಸಮೀಪದ ಪೇಟೆ ಕೃಷ್ಣಪ್ಪ ಬಡಾವಣೆ ಜಲಾವೃತಗೊಂಡು ನೆರೆ ಪರಿಸ್ಥಿತಿ ಉಂಟಾಗಿತ್ತು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮಳೆಯಿಂದ ಹಾನಿಗೊಳಗಾದ ನೆರೆ ಪ್ರದೇಶಗಳಗೆ ನಗರ ಪ್ರದಕ್ಷಿಣೆ ವೇಳೆ ಇಲ್ಲಿನ ಸ್ಥಳಕ್ಕೆ ಭೇಟಿ ನೀಡಿದರು ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ಕನಕನಗರ ನಿವಾಸಿ ಸಂಪತ್‌ಕುಮಾರ್‌ ಹೇಳಿದರು.

ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ. ಇವರ ಕುಮ್ಮಕ್ಕಿನಿಂದಲೇ ಕಟ್ಟಡ ತ್ಯಾಜ್ಯವನ್ನು ರಾಜಕಾಲುವೆಗೆ ಸುರಿಯಲಾಗುತ್ತಿದೆ ಎಂದು ಬಿಬಿಎಂಪಿ ಸದಸ್ಯೆ ಪದ್ಮಾವತಿ ಶ್ರೀನಿವಾಸ್ ದೂರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.