ADVERTISEMENT

‘ಎನ್‌ಇಪಿ ವಿರೋಧಿಸಿ, ಒಕ್ಕೂಟ ವ್ಯವಸ್ಥೆ ಉಳಿಸಿ’

ನ.26ರ ಭಾರತ ಮುಷ್ಕರ ಬೆಂಬಲಿಸಲು ಎಡ ವಿದ್ಯಾರ್ಥಿ ಸಂಘಟನೆಗಳ ಕರೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 20:44 IST
Last Updated 23 ನವೆಂಬರ್ 2020, 20:44 IST

ಬೆಂಗಳೂರು: ‘ರಾಜ್ಯ ಸರ್ಕಾರಗಳಿಗೆ ಶಿಕ್ಷಣ ಕ್ಷೇತ್ರದ ಮೇಲಿರುವ ಅಧಿಕಾರ ಮತ್ತು ಹಕ್ಕುಗಳನ್ನು ಮೊಟಕುಗೊಳಿಸುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ವಿರೋಧಿಸುವ ಮೂಲಕ ಒಕ್ಕೂಟ ವ್ಯವಸ್ಥೆಯ ಆಶಯಗಳನ್ನು ಉಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ನ.26ರಂದು ನಡೆಯಲಿರುವ ಅಖಿಲ ಭಾರತ ಮುಷ್ಕರವನ್ನು ವಿದ್ಯಾರ್ಥಿಗಳು ಬೆಂಬಲಿಸಬೇಕು’ ಎಂದು ಎಡ ವಿದ್ಯಾರ್ಥಿ ಸಂಘಟನೆಗಳು ಕರೆ ನೀಡಿವೆ.

‘ಎನ್‌ಇಪಿಯು ಅಸಂವಿಧಾನಿಕವಾಗಿದೆ. ಮೇಲ್ನೋಟಕ್ಕೆ ಎಲ್ಲರೂ ಒಪ್ಪಿಕೊಳ್ಳುವಂತಿದ್ದರೂ, ಅದರ ಅಂತರ್ಯದಲ್ಲಿ ಶಿಕ್ಷಣದ ಖಾಸಗೀಕರಣ, ಕೇಸರಿಕರಣ, ಇತಿಹಾಸ ತಿರುಚುವಿಕೆಯ ಹಲವು ಅಂಶಗಳು ಈ ನೀತಿಯಲ್ಲಿ ಅಡಕವಾಗಿವೆ’ ಎಂದು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಗಳು ದೂರಿದವು.

‘ಎನ್‌ಇಪಿಯನ್ನು ಸಂವಿಧಾನದ ಮಾನ್ಯತೆ ಪಡೆದ ಎಲ್ಲ ಭಾಷೆಗಳಿಗೆ ಅನುವಾದಿಸಿ ಅಧ್ಯಯನಕ್ಕೆ ಅವಕಾಶ ನೀಡಬೇಕು. ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳು, ಅಂಗನವಾಡಿ, ಬಿಸಿಯೂಟ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲರೂ ಚರ್ಚಿಸಿ ತಿದ್ದುಪಡಿ ಸಲಹೆಗಳನ್ನು ನೀಡಲು ಅಗತ್ಯವಾದ ಕಾಲಾವಕಾಶ ನೀಡಲೇಬೇಕು’ ಎಂದು ಎಸ್‌ಎಫ್‌ಐನ ರಾಜ್ಯ ಕಾರ್ಯದರ್ಶಿ ಕೆ. ವಾಸುದೇವರೆಡ್ಡಿ ಹೇಳಿದರು.

ADVERTISEMENT

‘ಎನ್‌ಇಪಿ ಕುರಿತು ರಾಜ್ಯ ವಿಧಾನಸಭೆ, ವಿಧಾನ ಪರಿಷತ್ತಿನ ಉಭಯ ಸದನಗಳಲ್ಲಿ ಸಮಗ್ರ ಚರ್ಚೆ ನಡೆಸಬೇಕು. ಈ ಸದನದಲ್ಲಿ ಈ ಕುರಿತು ಜನಪ್ರತಿನಿಧಿಗಳು ಮಾತನಾಡಬೇಕು. ಈ ನೀತಿಯಲ್ಲಿ ಪ್ರಸ್ತಾಪಿಸಿರುವ ತ್ರಿಭಾಷಾ ಸೂತ್ರವನ್ನು ತಮಿಳುನಾಡು ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರ ವಿರೋಧಿಸಬೇಕು’ ಎಂದು ಅವರು ಒತ್ತಾಯಿಸಿದರು.

ಎಐಎಸ್‌ಎಫ್‌ ರಾಜ್ಯ ಕಾರ್ಯದರ್ಶಿ ರಮೇಶ್‌ ನಾಯ್ಕ್, ಎಐಡಿಎಸ್‌ಒ ರಾಜ್ಯ ಸಮಿತಿ ಸದಸ್ಯ ಕಲ್ಯಾಣ್, ಎಐಎಸ್‌ಎ ರಾಜ್ಯ ಸಂಚಾಲಕ ಕಿಶನ್, ಕೆವಿಎಸ್‌ ರಾಜ್ಯ ಸಂಚಾಲಕ ಸರೋವರ ಬೆಂಕಿಕೆರೆ, ಎಸ್ಎಫ್‌ಐ ರಾಜ್ಯ ಜಂಟಿ ಕಾರ್ಯದರ್ಶಿ ಭೀಮನಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.