ADVERTISEMENT

ಜೈಲಿನಿಂದ ಹೊರಬಂದು 42 ವಾಹನ ಕದ್ದಿದ್ದ ‘ಡಾಲಿ’

ಮಹದೇವಪುರ ಪೊಲೀಸರಿಂದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 21:40 IST
Last Updated 22 ನವೆಂಬರ್ 2022, 21:40 IST

ಬೆಂಗಳೂರು: ನಗರದಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪದಡಿ ಎನ್‌. ಪ್ರಶಾಂತ್ ಅಲಿಯಾಸ್ ಡಾಲಿಯನ್ನು (25) ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.

‘ಅತ್ತಿಬೆಲೆ ಹೋಬಳಿ ಬಿದರಗುಪ್ಪೆಯ ಎನ್‌. ಪ್ರಶಾಂತ್, ಅಪರಾಧ ಹಿನ್ನೆಲೆಯುಳ್ಳವ. ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿ ಜಾಮೀನು ಮೇಲೆ ಹೊರಬಂದು ಹಳೇ ಚಾಳಿ ಮುಂದುವರಿಸಿದ್ದ. ಈತನಿಂದ ₹ 25 ಲಕ್ಷ ಮೌಲ್ಯದ 42 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರ್‌ಎಚ್‌ಬಿ ಕಾಲೊನಿ ಮುಖ್ಯರಸ್ತೆಯ ಹೋಟೆಲೊಂದರ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ನ. 7ರಂದು ಕಳ್ಳತನ ಆಗಿತ್ತು. ಈ ಬಗ್ಗೆ ದಾಖಲಾದ ಪ್ರಕರಣದ ತನಿಖೆ ಕೈಗೊಂಡಾಗ ಆರೋಪಿ ಸಿಕ್ಕಿಬಿದ್ದ’ ಎಂದರು.

ADVERTISEMENT

ತಮಿಳುನಾಡಿನಲ್ಲಿ ಮಾರಾಟ: ‘ಮನೆಗಳ ಮುಂದೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಹ್ಯಾಂಡಲ್‌ ಲಾಕ್ ಮುರಿದು ಆರೋಪಿ ಕಳ್ಳತನ ಮಾಡುತ್ತಿದ್ದ. ಅದೇ ವಾಹನಗಳನ್ನು ತಮಿಳುನಾಡಿಗೆ ತೆಗೆದುಕೊಂಡು ಹೋಗಿ ಮಾರುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ನೋಂದಣಿ ಫಲಕ ಬದಲಿಸುತ್ತಿದ್ದ ಆರೋಪಿ, ತನ್ನದೇ ವಾಹನವೆಂದು ಗ್ರಾಹಕರಿಗೆ ಹೇಳುತ್ತಿದ್ದ. ಕೆಲದಿನ ಬಿಟ್ಟು ದಾಖಲೆ ಕೊಡುವುದಾಗಿ ಹೇಳಿ ಕಡಿಮೆ ಬೆಲೆಗೆ ವಾಹನ ಮಾರುತ್ತಿದ್ದ. ಅದರಿಂದ ಬಂದ ಹಣವನ್ನು ಮೋಜು–ಮಸ್ತಿಗೆ ಖರ್ಚು ಮಾಡುತ್ತಿದ್ದ. ಹಣ ಖಾಲಿಯಾಗುತ್ತಿದ್ದಂತೆ ಪುನಃ ಕೃತ್ಯ ಎಸಗುತ್ತಿದ್ದ’ ಎಂದು ತಿಳಿಸಿದರು.

‘ತಮಿಳುನಾಡಿನಲ್ಲೂ ಕಾರ್ಯಾಚರಣೆ ನಡೆಸಿ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ವೈಟ್‌ಫೀಲ್ಡ್, ಕೆ.ಆರ್.ಪುರ, ಸೋಲದೇವನಹಳ್ಳಿ, ಸರ್ಜಾಪುರ, ತುಮಕೂರು ಹಾಗೂ ದಾಬಸ್‌ಪೇಟೆ ಠಾಣೆ ವ್ಯಾಪ್ತಿಯಲ್ಲೂ ಆರೋಪಿ ವಾಹನ ಕಳ್ಳತನ ಮಾಡಿರುವುದು ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.