ADVERTISEMENT

ಕನ್ನಮಂಗಲ: ಪ್ರತಿ ವಾರ ರೈತ ಸಂತೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 19:25 IST
Last Updated 7 ಜುಲೈ 2019, 19:25 IST
ಕನ್ನಮಂಗಲ ಕೆರೆ ದಂಡೆ ಮೇಲೆ ಭಾನುವಾರ ನಡೆದ ‘ರೈತ ಸಂತೆ’ಯಲ್ಲಿ ಸಾರ್ವಜನಿಕರು ತರಕಾರಿ ಖರೀದಿ ಮಾಡಿದರು
ಕನ್ನಮಂಗಲ ಕೆರೆ ದಂಡೆ ಮೇಲೆ ಭಾನುವಾರ ನಡೆದ ‘ರೈತ ಸಂತೆ’ಯಲ್ಲಿ ಸಾರ್ವಜನಿಕರು ತರಕಾರಿ ಖರೀದಿ ಮಾಡಿದರು   

ಮಹದೇವಪುರ: ನಗರದ ಕನ್ನಮಂಗಲ ಕೆರೆ ದಂಡೆ ಮೇಲೆ ಪ್ರತಿ ಭಾನುವಾರವೂ ರೈತ ಸಂತೆ ಸಂಘಟಿಸಲು ಸುತ್ತಮುತ್ತಲ ನಿವಾಸಿಗಳು ನಿರ್ಧರಿಸಿದರು.

ಗ್ರಾಮ ಪಂಚಾಯಿತಿ ಸಹಕಾರದಲ್ಲಿ ಆಯೋಜಿಸಿದ್ದ ರೈತ ಸಂತೆಬೆಳಿಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ನಡೆಯಿತು. ಸುತ್ತಮುತ್ತಲ ಅಪಾರ್ಟ್‌ಮೆಂಟ್‌ಗಳ ನೂರಾರು ಜನರು ತರಕಾರಿ, ಹಣ್ಣು–ಹಂಪಲು ಖರೀದಿ ಮಾಡಿದರು. ಗ್ರಾಮ ಪಂಚಾಯಿತಿ ಅಧಿಕಾರಿಗಳು ಮೊದಲೇ ತಿಳಿಸಿದ್ದ ಹಿನ್ನೆಲೆಯಲ್ಲಿ ರೈತರು ತಾವು ಬೆಳೆದಿದ್ದ ತಾಜಾ ತರಕಾರಿಗಳನ್ನು ಸಂತೆಗೆ ತಂದಿದ್ದರು.

ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರತಿವಾರವೂ ಸಂತೆ ಆಯೋಜಿಸಲು ನಿವಾಸಿಗಳು ತೀರ್ಮಾನಿಸಿದರು. ಇದಕ್ಕೆ ಸುತ್ತಮುತ್ತಲ ಹಳ್ಳಿಯ ರೈತರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ADVERTISEMENT

ಇದಕ್ಕೂ ಮುನ್ನ ಸ್ಥಳೀಯರು ಕೆರೆಯ ಸುತ್ತಮುತ್ತ ಐನೂರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ನೀರುಣಿಸಿದರು.

ಕೆರೆ ಸುತ್ತಮುತ್ತ ನಿರ್ಮಿಸಿರುವ ಪಾದಚಾರಿ ಮಾರ್ಗದಲ್ಲಿ ಕೆರೆ ಉಳಿಸುವ ಕುರಿತ ಸಂದೇಶಗಳಿರುವ ಭಿತ್ತಿಪತ್ರಗಳನ್ನು ಹಿಡಿದು ಸಾಲಾಗಿ ಸಂಚರಿಸಿದರು.

‘ಕೆರೆ ದಂಡೆಯ ಕಡಿಮೆ ಜಾಗದಲ್ಲಿ ಮಿಯಾವಾಕಿ ಉದ್ಯಾನ ನಿರ್ಮಿಸಲಾಗುವುದು. ದಟ್ಟವಾದ ಅರಣ್ಯ ನಿರ್ಮಿಸುವುದರಿಂದ ಅನೇಕ ಪ್ರಾಣಿ ಪಕ್ಷಗಳಿಗೆ ಅನುಕೂಲವಾಗಲಿದೆ’ ಎಂದು ನಿವಾಸಿ ಮಂಜುನಾಥ ಅತ್ರೆ ಹೇಳಿದರು.

‘ಕೆರೆ ಅಭಿವೃದ್ಧಿ ಅಷ್ಟೇ ಅಲ್ಲ, ಕೆರೆಯಿಂದ ಏನು ಲಾಭಗಳಿವೆ. ಅಂತರ್ಜಲ ಮಟ್ಟ ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಲಾಗುವುದು’ ನಿವಾಸಿ ವಂದನಾ ರಾವ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.