ADVERTISEMENT

ಮಲ್ಲೇಶ್ವರ: ಮನೆ ಬಾಗಿಲಲ್ಲೇ ಕೋವಿಡ್ ತಪಾಸಣೆ

ಕೊರೋನಾ ಪರೀಕ್ಷೆಗೆ ವಿನೂತನ ಡ್ರೈವ್ ಥ್ರೂ/ವಾಕ್ ಇನ್ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 19:54 IST
Last Updated 19 ಜನವರಿ 2022, 19:54 IST
ಮಲ್ಲೇಶ್ವರದಲ್ಲಿ ಬುಧವಾರ ಆರಂಭವಾದ ‘ಡ್ರೈವ್ ಥ್ರೂ/ವಾಕ್ ಇನ್’ ಕೇಂದ್ರದಲ್ಲಿ ಎನ್‌ಸಿಸಿ ಕೆಡೆಟ್‌ವೊಬ್ಬರ ಕೊರೊನಾ ಸೋಂಕಿನ ಪರೀಕ್ಷೆ ನಡೆಸಲಾಯಿತು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಇದ್ದರು
ಮಲ್ಲೇಶ್ವರದಲ್ಲಿ ಬುಧವಾರ ಆರಂಭವಾದ ‘ಡ್ರೈವ್ ಥ್ರೂ/ವಾಕ್ ಇನ್’ ಕೇಂದ್ರದಲ್ಲಿ ಎನ್‌ಸಿಸಿ ಕೆಡೆಟ್‌ವೊಬ್ಬರ ಕೊರೊನಾ ಸೋಂಕಿನ ಪರೀಕ್ಷೆ ನಡೆಸಲಾಯಿತು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಇದ್ದರು   

ಬೆಂಗಳೂರು: ಮಲ್ಲೇಶ್ವರ ಕ್ಷೇತ್ರದ ವ್ಯಾಪ್ತಿಯಲ್ಲಿ ಆರಂಭಿಸಿರುವ ವಿನೂತನ ‘ಡ್ರೈವ್ ಥ್ರೂ/ವಾಕ್ ಇನ್’ ವ್ಯವಸ್ಥೆಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಬುಧವಾರ ಚಾಲನೆ ನೀಡಿದರು.

ಮನೆ ಮನೆಗೂ ತೆರಳಿ ತ್ವರಿತ ಗತಿಯಲ್ಲಿ ಕೋವಿಡ್ ಸೋಂಕು ಪರೀಕ್ಷೆ ಮತ್ತು ಸಾರ್ವಜನಿಕರು ತಾವಾಗಿಯೇ ವಾಹನಗಳಲ್ಲಿ ಬಂದು ಸೋಂಕು ಪರೀಕ್ಷೆ ಮಾಡಿಸಿಕೊಳ್ಳುವ ವ್ಯವಸ್ಥೆ ಇದಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ‘ಕೋವಿಡ್‌ ಸೋಂಕು ವೇಗವಾಗಿ ಹರಡುತ್ತಿದೆ. ಹೀಗಾಗಿ ಇಂತಹ ಸರಳ, ಸುಲಭ ಮತ್ತು ಸುರಕ್ಷಿತ ತಪಾಸಣಾ ವ್ಯವಸ್ಥೆ ಬೇಕಾಗಿತ್ತು. ಈ ಪರೀಕ್ಷೆಗಳು ಸಂಪೂರ್ಣ ಉಚಿತವಾಗಿವೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಅದನ್ನು ಕೂಡ ಒದಗಿಸಲಾಗುವುದು’ ಎಂದರು.

ADVERTISEMENT

‘ಸಾರ್ವಜನಿಕರು ದ್ವಿಚಕ್ರ ವಾಹನ, ಆಟೊ ರಿಕ್ಷಾ, ಕಾರು ಇತ್ಯಾದಿಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು ಬಂದರೆ ವೈದ್ಯಕೀಯ ಸಿಬ್ಬಂದಿ ತಾವೇ ಖುದ್ದಾಗಿ ಗಂಟಲು ದ್ರವ ಸಂಗ್ರಹಿಸಿಕೊಳ್ಳಲಿದ್ದಾರೆ. ಪರೀಕ್ಷೆಯ ಫಲಿತಾಂಶವನ್ನು ಆಯಾ ವ್ಯಕ್ತಿಗಳ ಮೊಬೈಲ್ ದೂರವಾಣಿಗೆ ರವಾನಿಸಲಾಗುವುದು. ಈ ಕೇಂದ್ರವು ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೂ ಕಾರ್ಯನಿರ್ವಹಿಸಲಿದೆ. ಇಲ್ಲಿ ಗಂಟಲು ದ್ರವ ಸಂಗ್ರಹಕಾರರು, ಪ್ರಯೋಗಾಲಯ ತಂತ್ರಜ್ಞರು ಮತ್ತು ಡೇಟಾ ಎಂಟ್ರಿ ಆಪರೇಟರುಗಳು ಇರುತ್ತಾರೆ. ಈ ವ್ಯವಸ್ಥೆಯನ್ನು ಮಲ್ಲೇಶ್ವರ ಕ್ಷೇತ್ರದ ಉಳಿದ ಭಾಗಗಳಿಗೂ ವಿಸ್ತರಿಸಲಾಗುವುದು. ಇಲ್ಲಿ ಯಾರು ಬೇಕಾದರೂ ಪರೀಕ್ಷೆ ಮಾಡಿಸಿಕೊಳ್ಳಬಹುದು’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಚಿವರು, ಕ್ಷೇತ್ರದ 7 ವಾರ್ಡ್‌ಗಳ ವ್ಯಾಪ್ತಿಯಲ್ಲೂ ಪ್ರತಿಯೊಂದು ಮನೆಗೂ ಹೋಗಿ ಸೋಂಕು ಪರೀಕ್ಷೆ ಮಾಡಲಿರುವ ಸಂಚಾರಿ ತಪಾಸಣಾ ವಾಹನಗಳಿಗೆ ಹಸಿರು ನಿಶಾನೆ ತೋರಿಸಿದರು.

‘ಈ ವಾಹನಗಳಲ್ಲಿ ಕೂಡ ನುರಿತ ವೈದ್ಯಕೀಯ ಸಿಬ್ಬಂದಿಗಳಿದ್ದು, ಸ್ಥಳದಲ್ಲೇ ಆರ್‌ಎಟಿ ಹಾಗೂ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಲಿದ್ದಾರೆ. ಅಗತ್ಯವೆನಿಸಿದರೆ ಗಂಟಲು ದ್ರವ ಸಂಗ್ರಹಿಸಿಕೊಳ್ಳಲಿದ್ದು, ಫಲಿತಾಂಶವನ್ನು ಸಂಬಂಧಿಸಿದ ವ್ಯಕ್ತಿಗಳ ಮೊಬೈಲಿಗೆ ಕಳಿಸಿ ಕೊಡಲಾಗುವುದು’ ಎಂದು ಸಚಿವರು ತಿಳಿಸಿದರು.

‘ಸೋಂಕಿತರ ಜತೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ತಪಾಸಣೆಯನ್ನೂ ಉಚಿತವಾಗಿ ನಡೆಸಲಾಗುವುದು. ಆದರೆ, ಇದಕ್ಕಾಗಿ ಯಾರನ್ನೂ ಒತ್ತಾಯ ಮಾಡುವುದಿಲ್ಲ’ ಎಂದರು.

ಕೋವಿಡ್ ಉಸ್ತುವಾರಿ ಅಧಿಕಾರಿ ಉಜ್ವಲ್ ಕುಮಾರ್ ಘೋಷ್ ಮತ್ತು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾ
ರಿಗಳಾದ ಡಾ.ಮನೋರಂಜನ್ ಹೆಗ್ಡೆ, ಡಾ.ಸುಚೇತಾ, ಡಾ.ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.