ADVERTISEMENT

ಮಸಾಜ್‌ಗೆ ಹೋಗಿದ್ದವನ ₹ 15 ಸಾವಿರ ಕಳ್ಳತನ

ತಿಲಕ್‌ನಗರ ಠಾಣೆಗೆ ದೂರು ನೀಡಿದ ರ‍್ಯಾಪಿಡೊ ಬೈಕ್ ಸವಾರ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 21:42 IST
Last Updated 5 ಡಿಸೆಂಬರ್ 2022, 21:42 IST

ಬೆಂಗಳೂರು: ಮಸಾಜ್‌ ಮಾಡಿಸಲೆಂದು ಸ್ಪಾಗೆ ಹೋಗಿದ್ದ ರ‍್ಯಾಪಿಡೊ ಬೈಕ್‌ ಸವಾರರೊಬ್ಬರ ಜೇಬಿನಲ್ಲಿದ್ದ ₹ 15 ಸಾವಿರ ಕಳ್ಳತನ ಮಾಡಲಾಗಿದ್ದು, ಈ ಸಂಬಂಧ ತಿಲಕ್‌ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನ್ಯೂ ತಿಪ್ಪಸಂದ್ರ ನಿವಾಸಿಯಾಗಿರುವ 24 ವರ್ಷದ ಯುವಕ, ಕಳ್ಳತನದ ಬಗ್ಗೆ ದೂರು ನೀಡಿದ್ದಾರೆ. ತಿಲಕ್‌ನಗರದ ಮುಖ್ಯರಸ್ತೆಯಲ್ಲಿರುವ ಸ್ಪಾದಲ್ಲಿ ಕೆಲಸ ಮಾಡುವ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ರ‍್ಯಾಪಿಡೊ ಬೈಕ್ ಸವಾರರಾಗಿ ಕೆಲಸ ಮಾಡುತ್ತಿದ್ದ ಯುವಕ, ಆರ್ಥಿಕ ಕಷ್ಟದಲ್ಲಿದ್ದರು. ಹೀಗಾಗಿ, ಮಹಿಳೆಯೊಬ್ಬರ ಬಳಿ ನ. 15ರಂದು ₹ 15 ಸಾವಿರ ಸಾಲ ಪಡೆದುಕೊಂಡಿದ್ದರು. ಅದನ್ನು ಜೇಬಿನಲ್ಲಿಟ್ಟುಕೊಂಡು ಅದೇ ದಿನ ಸಂಜೆ ದೇಹದ ಮಸಾಜ್ ಮಾಡಿಸಲೆಂದು ಸ್ಪಾಗೆ ಹೋಗಿದ್ದರು. ಮಸಾಜ್‌ಗಾಗಿ ₹ 1,800 ಪಾವತಿಸಿದ್ದರು.’

ADVERTISEMENT

‘ಸ್ಪಾದಲ್ಲಿದ್ದ ಮಹಿಳೆಯೊಬ್ಬರು ಯುವಕನನ್ನು ಕೊಠಡಿಗೆ ಕರೆದೊಯ್ದು ಬಟ್ಟೆ ಬಿಚ್ಚಿ ದೇಹದ ಮಸಾಜ್ ಮಾಡಿದ್ದರು. ಮಸಾಜ್ ಬಳಿಕ ಬಟ್ಟೆಗಳನ್ನು ಕೊಠಡಿಯಲ್ಲಿ ಇರಿಸಿದ್ದ ಯುವಕ, ಸ್ಪಾದಲ್ಲಿದ್ದ ಬಾತ್‌ರೂಮ್‌ನಲ್ಲೇ ಸ್ನಾನ ಮಾಡಿದ್ದರು. ಸ್ನಾನದ ಬಳಿಕ ಹೊರಬಂದು ಬಟ್ಟೆ ಹಾಕಿಕೊಂಡಿದ್ದರು. ಬಟ್ಟೆಯ ಜೇಬಿನಲ್ಲಿ ನೋಡಿದಾಗ, ₹ 15 ಸಾವಿರ ಹಣ ಇರಲಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.