ADVERTISEMENT

ಶಾಸಕರ ಬಡಾವಣೆಯಲ್ಲಿ ರಸ್ತೆ ಒತ್ತುವರಿ ತೆರವಿಗೆ ವಿಳಂಬ ಆರೋಪ

ಹೈಕೋರ್ಟ್‌ ಮೆಟ್ಟಿಲೇರಿದ ಮಾಜಿ ಶಾಸಕಿ ಚೌಗಲೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 19:16 IST
Last Updated 4 ಜುಲೈ 2018, 19:16 IST

ಬೆಂಗಳೂರು: ಶಾಸಕರ ಬಡಾವಣೆಯಲ್ಲಿ ರಸ್ತೆ ಒತ್ತುವರಿ ಮಾಡಿ ಕಟ್ಟಿದ ವಸತಿ ಸಮುಚ್ಚಯದ ಭಾಗಶಃ ತೆರವಿಗೆ ಸಂಬಂಧಿಸಿದ ಹೈಕೋರ್ಟ್‌ ಆದೇಶ ಜಾರಿಗೆ ಬಿಬಿಎಂಪಿ ವಿಳಂಬ ಮಾಡುತ್ತಿದೆ.

ಶಾಸಕರ ಬಡಾವಣೆಯ ಮೊದಲನೇ ಅಡ್ಡರಸ್ತೆ 30 ಅಡಿ ಅಗಲ ಇತ್ತು. ಇದು ಮಾಜಿ ಶಾಸಕಿ ಶಕುಂತಲಾ ಚೌಗಲೆ, ಟಿ.ಎನ್‌.ಚೌಗಲೆ, ರಾಮ್‌ ಸುಂದರಸಿಂಗ್‌ ಸೇರಿದಂತೆ ಹಲವರ ಮನೆಗಳಿಗೆ ನೇರ ಸಂಪರ್ಕ ಕಲ್ಪಿಸುತ್ತಿತ್ತು.

ಈ ರಸ್ತೆಯನ್ನು ಬಂದ್‌ ಮಾಡಲಾಗಿದೆ. ಅಲ್ಲದೆ, ಪ್ಲಾಟ್‌ ನಂ 102 ಮತ್ತು 103ನ್ನು ಒತ್ತುವರಿ ಮಾಡಿ, ಪ್ಲಾಟ್‌ ನಂ 104/105ರಲ್ಲಿ ‘ಕೆಕೆಆರ್‌ ವಜ್ರ’ ಅಪಾರ್ಟ್‌ಮೆಂಟ್‌ ಕಟ್ಟಲಾಗಿದೆ. ಇದರಿಂದ ನಿವಾಸಿಗಳು ತಮ್ಮ ಮನೆಗಳಿಗೆ ಸುಮಾರು ಒಂದೂವರೆ ಕಿಲೋಮೀಟರ್‌ ಬಳಸಿ ಕೊಂಡು ಬರಬೇಕಾಗುತ್ತಿದೆ. ಈ ಬಗ್ಗೆ ಶಕುಂತಲಾ ಚೌಗಲೆ ಮತ್ತು ಇತರರು ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ಸುಮಾರು 9 ವರ್ಷ ವಿಚಾರಣೆ ಬಳಿಕ ಹೈಕೋರ್ಟ್‌ ಅರ್ಜಿದಾರರ ಪರ ತೀರ್ಪು ನೀಡಿದೆ. ಆದರೆ, ಈ ಆದೇಶವನ್ನು ಬಿಡಿಎ ಅಥವಾ ಬಿಬಿಎಂಪಿ ಜಾರಿಗೊಳಿಸಲಿಲ್ಲ. ಈ ಬಗ್ಗೆ ಶಕುಂತಲಾ ಅವರು 2017ರ ನವೆಂಬರ್‌ 18ರಂದು ಮಾಹಿತಿ ಹಕ್ಕು ಕಾಯ್ದೆ ಅಡಿ ಪ್ರಶ್ನಿಸಿದ್ದಾರೆ.

‘ಈಬಡಾವಣೆಯನ್ನು ಈಗಾಗಲೇ ಬಿಬಿಎಂಪಿಗೆ ಹಸ್ತಾಂತರಿಸಲಾಗಿದೆ. ನ್ಯಾಯಾಲಯದ ಆದೇಶಕ್ಕೆ ಸಂಬಂಧಿ ಸಿದಂತೆ ಕ್ರಮ ಕೈಗೊಂಡಿರುವ ದಾಖಲೆ ಗಳು ಲಭ್ಯವಿಲ್ಲ’ ಎಂದುಬಿಡಿಎ ಪ್ರತಿಕ್ರಿಯಿಸಿದೆ. ನಿವೇಶನ ಸಂಖ್ಯೆ 17ರಲ್ಲಿ ಬದಲಿ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದು ಶಕುಂತಲಾ ಅವರಿಗೆ ಬಿಬಿಎಂಪಿ ಹಿಂಬರಹ ನೀಡಿದೆ. ‘ವಾಸ್ತವವಾಗಿ ಅಲ್ಲಿ ಯಾವುದೇ ರಸ್ತೆ ಇಲ್ಲ. ಹೀಗಾಗಿ ಬಿಬಿಎಂಪಿ ತಪ್ಪು ಮಾಹಿತಿ ನೀಡಿದೆ’ ಎಂದು ಆರೋಪಿಸಿ ಶಕುಂತಲಾ ಅವರು ಕರ್ನಾಟಕ ಮಾಹಿತಿ ಆಯೋಗಕ್ಕೆ ದೂರು ನೀಡಿದರು.

ಸರಿಯಾದ ಮಾಹಿತಿ ನೀಡದಿರುವುದು ಹಾಗೂ ವಿಚಾರಣೆಗೆ ಗೈರಾಗಿರುವುದನ್ನು ಪರಿಗಣಿಸಿ ಬಿಬಿಎಂಪಿ ಮಾಹಿತಿ ಅಧಿಕಾರಿಗೆ ಏಕೆ ₹ 25 ಸಾವಿರ ದಂಡ ವಿಧಿಸಬಾರದು ಎಂದು ಪ್ರಶ್ನಿಸಿ ಮಾಹಿತಿ ಆಯೋಗ ನೋಟಿಸ್‌ ನೀಡಿದೆ. ಆಗಸ್ಟ್‌ 14ರಂದು ವಿಚಾರಣೆ ನಡೆಸಲು ಆಯೋಗ ದಿನಾಂಕ ನಿಗದಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.