ADVERTISEMENT

ತಾಯಿ, ಇಬ್ಬರು ಮಕ್ಕಳ ಸಾವು

ಕೃಷಿ ಹೊಂಡದಲ್ಲಿ ಮುಳುಗಿ ದುರಂತ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 21:01 IST
Last Updated 9 ಡಿಸೆಂಬರ್ 2018, 21:01 IST

ಹೊಸಕೋಟೆ: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ ಘಟನೆ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪೆತ್ತನಹಳ್ಳಿ ಗ್ರಾಮದ ಬಳಿ ಶನಿವಾರ ನಡೆದಿದೆ.

ಗುಟ್ಟಹಳ್ಳಿಯ ಲಕ್ಷ್ಮಮ್ಮ (33) ಮತ್ತು ಆಕೆಯ ಮಕ್ಕಳಾದ ಮೋನಿಶಾ(7) ಮೋಹಿತ್(5) ಮೃತರು. ಶ್ರೀರಾಮಪ್ಪ ಅವರ ಪತ್ನಿಯಾದ ಲಕ್ಷ್ಮಮ್ಮ ದೊಡ್ಡ ಗಟ್ಟಿಗನಬ್ಬೆ ಬಳಿಯ ವಿವೇಕಾನಂದ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಅದೇ ಶಾಲೆಯಲ್ಲಿ ಪುತ್ರಿ ಮೋನಿಶಾ 2ನೇ ತರಗತಿ ಮತ್ತು ಪುತ್ರ ಮೋಹಿತ್, ಜ್ಯೋತಿ ಶಾಲೆಯಲ್ಲಿ ಯುಕೆಜಿ ಓದುತ್ತಿದ್ದರು.

ಶನಿವಾರ ಸಂಜೆ ಲಕ್ಷ್ಮಮ್ಮ ಎಂದಿನಂತೆ ಮಕ್ಕಳೊಂದಿಗೆ ವಾಯು ವಿಹಾರಕ್ಕೆ ಹೋಗಿದ್ದರು. ರಸ್ತೆ ಬದಿ ಇದ್ದ ಕೃಷಿ ಹೊಂಡದ ಬಳಿ ಹೋದ ಮಕ್ಕಳು ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಮೊಬೈಲ್‌ನಲ್ಲಿ ತಲ್ಲೀನರಾಗಿದ್ದ ಲಕ್ಷ್ಮಮ್ಮ ಇದನ್ನು ಗಮನಿಸಲಿಲ್ಲ.

ADVERTISEMENT

ಹಿಂದೆ ತಿರುಗಿ ನೋಡಿದಾಗ ಮಕ್ಕಳು ಇಲ್ಲದ್ದನ್ನು ಕಂಡು ಗಾಬರಿ ಗೊಂಡಿದ್ದಾರೆ. ಹಿಂದಿರುಗಿ ಬಂದು ನೋಡಿದಾಗ ಮಕ್ಕಳು ಹೊಂಡದಲ್ಲಿ ಮುಳುಗುತ್ತಿರುವುದನ್ನು ಕಂಡು ಅವರನ್ನು ರಕ್ಷಿಸಲು ನೀರಿಗೆ ಧುಮಿಕಿದರು. ಕೃಷಿ ಹೊಂಡದಲ್ಲಿ ಸುಮಾರು 12 ಅಡಿಯಷ್ಟು ನೀರಿದ್ದು ಈಜು ಬಾರದ ಆಕೆ ಸಹ ನೀರಿನಲ್ಲಿ ಮುಳುಗಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.