ADVERTISEMENT

ಜಗಳ; ಮಧ್ಯ ಪ್ರವೇಶಿಸಿದವನ ಕೊಲೆ, ನಾಲ್ವರ ಬಂಧನ

ರಾಮಮೂರ್ತಿನಗರ ಪೊಲೀಸರಿಂದ ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 19:25 IST
Last Updated 8 ಅಕ್ಟೋಬರ್ 2019, 19:25 IST

ಬೆಂಗಳೂರು: ಸಂಬಂಧಿಕರ ಜಗಳದಲ್ಲಿ ಮಧ್ಯಪ್ರವೇಶಿಸಿದ್ದ ರಾಜೇಂದ್ರ ಬಿಸ್ವಾ (27) ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಆ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

‘ನೇಪಾಳದ ಅಮಿತ್‌, ಗೋವಿಂದ್, ಸುರೇಶ್ ಹಾಗೂ ಈಶ್ವರ್ ಬಂಧಿತರು. ಅವರೆಲ್ಲ ಸೆಕ್ಯುರಿಟಿ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಇದೇ 6ರಂದು ರಾಜೇಂದ್ರ ಅವರನ್ನು ಅ‌ಡ್ಡಗಟ್ಟಿ ಕೃತ್ಯ ಎಸಗಿದ್ದರು. ತೀವ್ರ ಗಾಯಗೊಂಡಿದ್ದ ರಾಜೇಂದ್ರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ’ ಎಂದು ರಾಮ ಮೂರ್ತಿನಗರ ಪೊಲೀಸರು ಹೇಳಿದರು.

‘ನೇಪಾಳದವರೇ ಆದ ರಾಜೇಂದ್ರ ಕೂಡಾ ಸೆಕ್ಯುರಿಟಿ ಸಿಬ್ಬಂದಿ ಆಗಿ ಕೆಲಸ ಮಾಡುತ್ತಿದ್ದರು. ಕಸ್ತೂರಿನಗರದಲ್ಲಿ ಕುಟುಂಬದ ಜೊತೆ ನೆಲೆಸಿದ್ದರು’ ಎಂದರು.

ADVERTISEMENT

ಅಕ್ಕ–ತಂಗಿಯನ್ನೇ ಮದುವೆ ಆಗಿದ್ದರು: ‘ಕೊಲೆಯಾದ ರಾಜೇಂದ್ರ ಅವರ ಸ್ನೇಹಿತರಾದ ಭೀಮ್ ಹಾಗೂ ಆರೋಪಿ ಅಮಿತ್, ಒಂದೇ ಕುಟುಂಬದ ಅಕ್ಕ–ತಂಗಿಯನ್ನು ಮದುವೆ ಆಗಿದ್ದರು. ಎಲ್ಲರೂ ಒಂದೇ ಪ್ರದೇಶದಲ್ಲಿ ವಾಸವಿದ್ದರು’ ಎಂದು ಪೊಲೀಸರು ಹೇಳಿದರು.

‘ಆರೋಪಿ ಅಮಿತ್, ಇತ್ತೀಚೆಗಷ್ಟೇ ಪತ್ನಿಯನ್ನು ತೊರೆದು ಪ್ರತ್ಯೇಕವಾಗಿ ವಾಸವಿದ್ದ. ಆತನ ವರ್ತನೆಯನ್ನು ಪ್ರಶ್ನಿಸಿದ್ದ ಭೀಮ್, ಪತ್ನಿ ಜೊತೆ ಸಂಸಾರ ಮಾಡುವಂತೆ ಅಮಿತ್‌ಗೆ ಹೇಳಿದ್ದ. ಅದೇ ವಿಚಾರವಾಗಿ ಅವರಿಬ್ಬರ ನಡುವೆ ಜಗಳ ನಡೆದಿತ್ತು. ಮಧ್ಯಪ್ರವೇಶಿಸಿದ್ದ ರಾಜೇಂದ್ರ, ಇಬ್ಬರಿಗೂ ಬುದ್ದಿಮಾತು ಹೇಳಿದ್ದರು’

‘ತಮ್ಮ ಕುಟುಂಬದವರ ಜಗಳದಲ್ಲಿ ಮಧ್ಯಪ್ರವೇಶಿಸಿದನೆಂಬ ಕಾರಣಕ್ಕಾಗಿ ಕೋಪಗೊಂಡಿದ್ದ ಅಮಿತ್, ಸಹಚರರ ಜೊತೆ ಸೇರಿ ರಾಜೇಂದ್ರನನ್ನು ಕೊಂದಿದ್ದ’ ಎಂದು ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.