ADVERTISEMENT

ರಾಷ್ಟ್ರೀಯ ತೋಟಗಾರಿಕೆ ಮೇಳಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2019, 19:53 IST
Last Updated 25 ಜನವರಿ 2019, 19:53 IST
ಹೊಸ ಗುಲಾಬಿ ತಳಿಗಳನ್ನು ಯಲಹಂಕ ಶಾಸಕ ವಿಶ್ವನಾಥ್ ಬಿಡುಗಡೆ ಮಾಡಿದರು. ಸಂಸ್ಥೆಯ ನಿರ್ದೇಶಕ ಎಂ.ಆರ್.ದಿನೇಶ್‌, ಬಾಗಲಕೋಟೆಯ ತೋಟಗಾರಿಕೆ ಇಲಾಖೆಯ ನಿವೃತ್ತ ಕುಲಪತಿ ಡಾ.ಮಹೇಶ್ವರ ಇದ್ದರು
ಹೊಸ ಗುಲಾಬಿ ತಳಿಗಳನ್ನು ಯಲಹಂಕ ಶಾಸಕ ವಿಶ್ವನಾಥ್ ಬಿಡುಗಡೆ ಮಾಡಿದರು. ಸಂಸ್ಥೆಯ ನಿರ್ದೇಶಕ ಎಂ.ಆರ್.ದಿನೇಶ್‌, ಬಾಗಲಕೋಟೆಯ ತೋಟಗಾರಿಕೆ ಇಲಾಖೆಯ ನಿವೃತ್ತ ಕುಲಪತಿ ಡಾ.ಮಹೇಶ್ವರ ಇದ್ದರು   

ಬೆಂಗಳೂರು: ‘ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ಸಿಗಬೇಕು. ಕೃಷಿ ತಂತ್ರಜ್ಞಾನವನ್ನು ರೈತರಿಗೆ ಸಮರ್ಪಕವಾಗಿ ತಲುಪಿಸಬೇಕಾಗಿದೆ. ಈಗಲೂ ಹಳೆ ಪದ್ದತಿಯಲ್ಲಿಯೇ ಬೇಸಾಯ ಮಾಡುವ ಕೃಷಿಕರು ಇದ್ದಾರೆ’ ಎಂದು ಯಲಹಂಕ ಶಾಸಕ ಎಸ್.ಅರ್.ವಿಶ್ವನಾಥ್ ಹೇಳಿದರು.

ಅವರು ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆಯು ಆಯೋಜಿಸಿದ್ದ ರಾಷ್ಟ್ರೀಯ ತೋಟಗಾರಿಕೆ ಮೇಳದ ಸಮಾರೋಪ ಸಮಾರಂಭದಲ್ಲಿ ಮೂರು ಹೊಸ ಗುಲಾಬಿ ತಳಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

‘ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆಯು ರೈತರಿಗೆ ತಂತ್ರಜ್ಞಾನದ ದಾಸೋಹವನ್ನು ನೀಡುತ್ತಿದೆ. ಸಂಸ್ಥೆಯ ತಂತ್ರಜ್ಞಾನವನ್ನು ರೈತರು ಅಳವಡಿಕೆ ಮಾಡಿಕೊಂಡರೆ ರೈತರ ಅದಾಯ ದ್ವಿಗುಣವಾಗುತ್ತದೆ. ನಮ್ಮ ರೈತರು ಇಂತಹ ಸಂಸ್ಥೆಗಳತ್ತ ಮುಖ ಮಾಡಬೇಕಿದೆ’ ಎಂದು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ಬಿ.ಎಲ್.ಮಹೇಶ್ವರ್ ತಿಳಿಸಿದರು.

ADVERTISEMENT

ಸಂಸ್ಥೆಯ ನಿರ್ದೇಶಕ ಎಂ.ಅರ್.ದಿನೇಶ್ ಅವರು ಮಾತನಾಡಿ, ‘ಸಂಸ್ಥೆಯ ವಿಜ್ಞಾನಿ ಡಾ.ತೇಜಸ್ವಿ ಅವರು ಅರ್ಕಾ ಶರ್ಮಿಳಾ, ಅರ್ಕಾ ಕಿನ್ನರಿ, ಅರ್ಕಾ ಸಿಂಚನ ಎನ್ನುವ ಮೂರು ಗುಲಾಬಿ ಹೊಸ ತಳಿಗಳನ್ನು ಅವಿಷ್ಕಾರ ಮಾಡಿದ್ದಾರೆ. ಈ ಮೂರು ತಳಿಗಳ ಗಿಡಗಳಲ್ಲಿ ಹೂವಿನ ಬಣ್ಣ ಹೆಚ್ಚು ಇರುತ್ತದೆ. ಉದ್ಯಾನಗಳಲ್ಲಿ ಈ ಗಿಡವನ್ನು ಬೆಳೆಸಿದರೆ ಹೆಚ್ಚು ಕಾಂತಿಯುಕ್ತವಾಗಿರುತ್ತದೆ’ ಎಂದು ತಳಿಗಳ ಬಗ್ಗೆ ಮಾಹಿತಿ ನೀಡಿದರು.

‘ಮೂರು ದಿನಗಳ ಕಾಲ ನಡೆದ ಮೇಳದಲ್ಲಿ ಸುಮಾರು 35 ಸಾವಿರ ರೈತರು ಭಾಗವಹಿಸಿದರು. ಹೆಚ್ಚಿನ ರೈತರು ತರಕಾರಿ ಮತ್ತು ಹೂವಿನ ತಳಿಗಳ ಬಗ್ಗೆ ಮಾಹಿತಿ ಪಡೆದರು. ಹೊರ ರಾಜ್ಯಗಳಿಂದ ಬಂದ ರೈತರು ಅಣಬೆ ಬೇಸಾಯದ ಕಡೆ ಹೆಚ್ಚಿನ ಒಲವು ತೋರಿಸಿದರು’ ಎಂದು ವಿಸ್ತರಣಾ ವಿಭಾಗದ ಮುಖ್ಯಸ್ಥರಾದ ಡಾ.ವೆಂಕಟಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.