ನೆಲಮಂಗಲ: ಪಟ್ಟಣದಲ್ಲಿ ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಬೆಳಗಿನ ಜಾವದವರೆಗೆ ಸುರಿದ ಮಳೆಗೆ ಅಡಕಮಾರನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ಜಲಾವೃತವಾಯಿತು. ಶಾಲೆ– ಕಾಲೇಜು, ಉದ್ಯೋಗಕ್ಕಾಗಿ ಬೆಂಗಳೂರು ಕಡೆಗೆ ನಿತ್ಯ ಸಂಚರಿಸುವವರು ಪರದಾಡುವಂತಾಯಿತು.
‘ಹೆಚ್ಚು ಮಳೆಯಾದಾಗಲೆಲ್ಲ ಅಡಕಮಾರನಹಳ್ಳಿಯ ಕೆಳಸೇತುವೆ, ತಗ್ಗುಪ್ರದೇಶ ಜಲಾವೃತವಾಗುತ್ತದೆ. ಕೆರೆಗಳ ಹೂಳೆತ್ತದ ಕಾರಣ ಜೊಂಡು ಬೆಳೆದುಕೊಂಡಿದೆ. ಇದರಿಂದ ಕೆರೆಗಳಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯ ಕಡಿಮೆ ಆಗಿದೆ. ಮಳೆ ಬಂದಾಗಲೆಲ್ಲ ನೀರು ರಸ್ತೆಯಲ್ಲಿ ಹರಿಯುತ್ತದೆ’ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಮಂಡಿ ವರೆಗೆ ನೀರು ನಿಂತಿದ್ದರಿಂದ ದ್ವಿಚಕ್ರವಾಹನ ಸವಾರರು ಪರದಾಡುವಂತಾಯಿತು. ವಾರಾಂತ್ಯದ ಸಂಚಾರ ದಟ್ಟಣೆಯ ಜೊತೆಗೆ, ಮಳೆಯೂ ಸುರಿದ ಕಾರಣ, ವಾಹನ ದಟ್ಟಣೆ ಹೆಚ್ಚಾಗಿತ್ತು. ಸೋಮವಾರ ಹಗಲು ತುಂತುರು ಮಳೆಯಾಗಿತ್ತು. ಜಲಾವೃತವಾಗಿದ್ದ ನೀರು ಕಡಿಮೆಯಾಗಿ ಸಾಮಾನ್ಯ ಸ್ಥಿತಿಗೆ ಮರಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.