ದಿನೇಶ್ ಗುಂಡೂರಾವ್
– ಪ್ರಜಾವಾಣಿ ಚಿತ್ರ
ಬೆಂಗಳೂರು: ರಾಷ್ಟ್ರೀಯ ಗುಣಮಟ್ಟ ಭರವಸೆಯ ಮಾನದಂಡಗಳ (ಎನ್‌ಕ್ಯೂಎಎಸ್) ಅಳವಡಿಕೆಗೆ ಸಂಬಂಧಿಸಿದಂತೆ ನಿರೀಕ್ಷಿತ ಗುರಿ ಸಾಧಿಸದಿದ್ದಲ್ಲಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.
ಈ ಬಗ್ಗೆ ಇಲಾಖೆ ಆದೇಶ ಹೊರಡಿಸಿದೆ. ‘ಮುಂದಿನ ಮೂರು ತಿಂಗಳಲ್ಲಿ ಈ ಮಾನದಂಡಗಳನ್ನು ಅಳವಡಿಸಿಕೊಂಡು, ನಿರೀಕ್ಷಿತ ಮಟ್ಟದಲ್ಲಿ ಗುರಿ ಸಾಧಿಸಬೇಕು. ಈ ಗುರಿ ಸಾಧಿಸಲು ವಿಫಲವಾದಲ್ಲಿ ‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ’ (ಎಬಿ-ಎಆರ್‌ಕೆ) ಅಡಿ ನೀಡಲಾಗುತ್ತಿರುವ ಪ್ರೋತ್ಸಾಹಧನದಿಂದ ಆಸ್ಪತ್ರೆಯನ್ನು ಅನರ್ಹಗೊಳಿಸಲಾಗುವುದು’ ಎಂದು ತಿಳಿಸಲಾಗಿದೆ.
‘ಕನಿಷ್ಠ 6 ತಿಂಗಳ ಒಳಗಾದರೂ ಮಾನದಂಡಗಳ ಗುರಿ ಸಾಧನೆ ಮಾಡಬೇಕು. ಇಲ್ಲವಾದಲ್ಲಿ, ಆಸ್ಪತ್ರೆಗಳ ವೈದ್ಯಕೀಯ ಮತ್ತು ಅರೆವೈದ್ಯಕೀಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವರ್ಗಾವಣೆಗೆ ಕ್ರಮ ವಹಿಸಲಾಗುವುದು. 9 ತಿಂಗಳೊಳಗೆ ಯಾವುದೇ ಸಾಧನೆ ಮಾಡದಿದ್ದರೆ, ಅಂತಹ ಆರೋಗ್ಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಎಲ್ಲ ಮುಖ್ಯ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಅಧಿಕಾರಿ ಹಾಗೂ ಸಿಬ್ಬಂದಿಯ ವಾರ್ಷಿಕ ವೇತನ ಬಡ್ತಿ ತಡೆ ಹಿಡಿಯಲಾಗುವುದು’ ಎಂದು ಹೇಳಲಾಗಿದೆ.
‘ಈ ಎಲ್ಲ ಕ್ರಮಗಳ ಹೊರತಾಗಿಯೂ ಯಾವುದೇ ಪ್ರಗತಿ ಸಾಧಿಸದ ಆರೋಗ್ಯ ಕೇಂದ್ರಗಳ ಮೇಲ್ವಿಚಾರಕರು ಹಾಗೂ ಸಿಬ್ಬಂದಿಯನ್ನು, ಕಳಪೆ ಗುಣಮಟ್ಟದ ಆರೈಕೆ ಹಾಗೂ ಚಿಕಿತ್ಸೆಗೆ ಹೊಣೆಗಾರರನ್ನಾಗಿ ಮಾಡಲಾಗುವುದು’ ಎಂದು ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.