ಬೆಂಗಳೂರು: 2021ರಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸುಗಳ ಪ್ರವೇಶಕ್ಕೆ ನಡೆಸಿದ್ದ ನೀಟ್ ಪರೀಕ್ಷೆ ಅನುಸಾರ ಮೊದಲನೇ ಸುತ್ತಿನ ಸೀಟು ಹಂಚಿಕೆ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಶನಿವಾರ ಸೀಟ್ ಮ್ಯಾಟ್ರಿಕ್ಸ್ ಮತ್ತು ಶುಲ್ಕ ವಿವರ ಪ್ರಕಟಿಸಲಾಗಿದ್ದು, ದೃಢೀಕರಣ ಚೀಟಿಯನ್ನು ಡೌನ್-ಲೋಡ್ ಮಾಡಿಕೊಳ್ಳುವ ಪ್ರಕ್ರಿಯೆಯೂ ಆರಂಭವಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ.
ಫೆ.4 ರಂದು ಈ ಮೂರೂ ಕೋರ್ಸುಗಳಿಗೆ ಮೊದಲ ಸುತ್ತಿನ ಸೀಟು ಹಂಚಿಕೆಯನ್ನು ಪ್ರಕಟಿಸಲಾಗುವುದು ಎಂದು ಕೆಇಎ ಪ್ರಕಟಣೆ ತಿಳಿಸಿದೆ.
ಇದಕ್ಕೂ ಮೊದಲು ಫೆ.1 ರ ಬೆಳಿಗ್ಗೆ 10 ಗಂಟೆಯವರೆಗೆ ವಿದ್ಯಾರ್ಥಿಗಳಿಗೆ ತಮ್ಮ ಇಷ್ಟದ ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಮತ್ತು ಫೆ.1 ರಿಂದ 3ರ ಬೆಳಿಗ್ಗೆ 10 ಗಂಟೆಯವರೆಗೆ ತಮ್ಮ ಐಚ್ಛಿಕ ವಿಷಯಗಳಲ್ಲಿ ಅಗತ್ಯವೆನಿಸಿದರೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದೆ.
ಬಳಿಕ ‘ಚಾಯ್ಸ್-1‘ ಮತ್ತು ’ಚಾಯ್ಸ್-2‘ ಸ್ತರದ ವಿದ್ಯಾರ್ಥಿಗಳು ನಿಗದಿತ ಶುಲ್ಕ ತುಂಬಿ, ಪ್ರವೇಶ ದಾಖಲಾತಿಯನ್ನು ಡೌನ್-ಲೋಡ್ ಮಾಡಿಕೊಳ್ಳಲು ಫೆ.4 ರ ಮಧ್ಯಾಹ್ನ 2 ಗಂಟೆಯಿಂದ ಫೆ.7 ರ ಮಧ್ಯಾಹ್ನ 1 ಗಂಟೆಯವರೆಗೆ ಅವಕಾಶವಿರುತ್ತದೆ. ನಂತರ, ವಿದ್ಯಾರ್ಥಿಗಳು ದೃಢೀಕೃತ ಪ್ರಮಾಣಪತ್ರಗಳೊಂದಿಗೆ ಮೂಲ ದಾಖಲೆಗಳನ್ನು ಫೆ.5 ರಿಂದ 7ರ ಒಳಗೆ ಬೆಂಗಳೂರಿನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಪರಿಶೀಲನೆಗೆ ಸಲ್ಲಿಸಬೇಕು ಎಂದು ಪ್ರಕಟಣೆ ವಿವರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.