ADVERTISEMENT

ನೆಲಮಂಗಲ ನಗರಸಭೆ ಕಾಂಗ್ರೆಸ್‌ ತೆಕ್ಕೆಗೆ

ಜೆಡಿಎಸ್‌, ಬಿಜೆಪಿಯ ಒಂಬತ್ತು ಸದಸ್ಯರಿಂದ ಅಡ್ಡ ಮತದಾನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2025, 16:13 IST
Last Updated 13 ಫೆಬ್ರುವರಿ 2025, 16:13 IST
ಎನ್‌.ಗಣೇಶ್‌
ಎನ್‌.ಗಣೇಶ್‌   

ನೆಲಮಂಗಲ: ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಗುರುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿಯ ಒಂಬತ್ತು ಸದಸ್ಯರು ಅಡ್ಡ ಮತದಾನ ಮಾಡಿದ ಪರಿಣಾಮವಾಗಿ ಕಾಂಗ್ರೆಸ್‌ನ ಎನ್‌.ಗಣೇಶ್‌ ಅಧ್ಯಕ್ಷರಾಗಿ, ಜಿ.ಆನಂದ್‌ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಎನ್‌.ಗಣೇಶ್‌ 18 ಮತ, ಜೆಡಿಎಸ್‌–ಬಿಜೆಪಿ ಮೈತ್ರಿ ಅಭ್ಯರ್ಥಿ ಆಂಜನಮೂರ್ತಿ 10 ಮತಗಳನ್ನು ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಆನಂದ್‌ 18, ಮೈತ್ರಿ ಅಭ್ಯರ್ಥಿ ಆಂಜನಪ್ಪ 10 ಮತಗಳನ್ನು ಪಡೆದರು.

ಶಾಸಕ ಎನ್‌.ಶ್ರೀನಿವಾಸ್‌ ಹಾಗೂ ವಿಧಾನ ಪರಿಷತ್‌ ಮಾಜಿ ಸದಸ್ಯ ಬಿ.ಎಂ.ಎಲ್‌. ಕಾಂತರಾಜು ಅವರ ತಂತ್ರಗಾರಿಕೆಯ ಫಲವಾಗಿ ನೆಲಮಂಗಲ ನಗರಸಭೆ ಕಾಂಗ್ರೆಸ್‌ ವಶವಾಗಿದೆ. ಬಿಜೆಪಿ–ಜೆಡಿಎಸ್‌ ಮೈತ್ರಿಕೂಟಕ್ಕೆ ಸೋಲಾಗಿದೆ.

ADVERTISEMENT

ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕು ಎಂದು ಮೈತ್ರಿ ಪಕ್ಷಗಳು ತಮ್ಮ ಚಿನ್ಹೆಯಡಿ ಗೆದ್ದಿದ್ದ ಜೆಡಿಎಸ್‌ನ 13, ಬಿಜೆಪಿಯ ಇಬ್ಬರು ಸದಸ್ಯರಿಗೆ ವಿಪ್‌ ಜಾರಿ ಮಾಡಿದ್ದರು. ಜೆಡಿಎಸ್‌ನಿಂದ ಗೆದ್ದಿದ್ದ 7, ಬಿಜೆಪಿಯ 2 ಸದಸ್ಯರು ವಿಪ್‌ ಉಲ್ಲಂಘಿಸಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಬೆಂಬಲಿಸಿದರು. ಶಾಸಕ ಶ್ರೀನಿವಾಸ್‌ ಅವರ ಮತ ಸೇರಿ ಕಾಂಗ್ರೆಸ್‌ಗೆ ಒಟ್ಟು 18 ಮತಗಳು ಚಲಾವಣೆಯಾದವು. ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್‌ ಗೈರಾಗಿದ್ದರು.

ನಗರಸಭೆ ಚುನಾವಣೆ ಹಿನ್ನೆಲೆ: ಈ ಹಿಂದೆ ನೆಲಮಂಗಲ ಪುರಸಭೆಯಾಗಿತ್ತು. ನಂತರ ನಗರಸಭೆಯಾಗಿ ಮೇಲ್ದರ್ಜೆಗೇರಿತು. ಆಗ ಅರಿಶಿನಕುಂಟೆ, ವಾಜರಹಳ್ಳಿ, ವಿಶ್ವೇಶ್ವರಪುರ, ಬಸವನಹಳ್ಳಿ ಗ್ರಾಮ ಪಂಚಾಯತಿಗಳು ನಗರಸಭೆ ವ್ಯಾಪ್ತಿಗೆ ಒಳಪಟ್ಟವು. ನ್ಯಾಯಾಲಯದ ಆದೇಶದಂತೆ ಪುರಸಭೆ ಸದಸ್ಯರನ್ನೇ ನಗರಸಭೆ ಸದಸ್ಯರನ್ನಾಗಿ ಮುಂದುವರಿಸಿ, ನಗರಸಭೆಗೆ ಸೇರ್ಪಡೆಯಾಗಿದ್ದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಿಂದ ಹೆಚ್ಚುವರಿ ನಾಮನಿರ್ದೇಶಿತ ನಾಲ್ವರು ಸದಸ್ಯರನ್ನು ಆಯ್ಕೆಮಾಡಲಾಗಿತ್ತು. ಇದರಿಂದ ನಗರಸಭೆಯ ಸದಸ್ಯಬಲ 27 ಇದೆ.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎನ್‌.ಶ್ರೀನಿವಾಸ್‌ ಶಾಸಕರಾಗಿ ಆಯ್ಕೆಯಾದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್‌ನ 7 ಮತ್ತು ಬಿಜೆಪಿಯ 2 ಹಾಗೂ ಪಕ್ಷೇತರ ಒಬ್ಬರು ಸದಸ್ಯರು ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು. ಜೆಡಿಎಸ್‌ ವಶವಾಗಿದ್ದ ನಗರಸಭೆಯನ್ನು ಕಾಂಗ್ರೆಸ್‌ ವಶಪಡಿಸಿಕೊಂಡಿತು. ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಮುಗಿದು ಎರಡು ತಿಂಗಳಾದರೂ ಚುನಾವಣೆ ನಡೆದಿರಲಿಲ್ಲ. ಚುನಾವಣೆ ನಡೆಸುವಂತೆ ಹೆಚ್ಚುವರಿ ನಾಲ್ವರು ಸದಸ್ಯರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ಚುನಾವಣೆ ನಡೆಸುವಂತೆ ಈಚೆಗೆ ಆದೇಶಿಸಿತ್ತು.

ಜಿ.ಆನಂದ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.