ADVERTISEMENT

ಕರಾಳ ದಿನಗಳ ನೋವಿನ ಗಂಟು ಬಿಚ್ಚಿಟ್ಟ ಮಹಿಳೆಯರು

ನೆಲತಾಯಿ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಹೃದಯಸ್ಪರ್ಶಿ ಕ್ಷಣಗಳು

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 19:45 IST
Last Updated 3 ಜನವರಿ 2019, 19:45 IST
(ಎಡದಿಂದ) ಪ್ರೇಮಾ ಜೆ.ಕೆ. (ಕರ್ನಾಟಕ ಅರಣ್ಯಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ), ಲಿಲ್ಲಿ (ರಂಗಭೂಮಿ ಕಲಾವಿದೆ), ಆರ್. ಮಂಗಳಾ (ಸಾಧನ ಮಹಿಳಾ ಸಂಘಟನೆ), ಜಯಲಕ್ಷ್ಮೀ (ಸ್ವರಾಜ್ ಸಂಘಟನೆ), ಜಾನ್ಸಿರಾಣಿ (ಸ್ಲಂ ಮಹಿಳಾ ಸಂಘಟನೆ), ರಾಜೇಶ್ವರಿ (ಗಾರ್ಮೆಂಟ್ ಮತ್ತು ಟೆಕ್ಸ್‌ಟೈಲ್ ಕಾರ್ಮಿಕರ ಸಂಘಟನೆ) ಅವರು ನೆಲತಾಯಿ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾದರು –ಪ್ರಜಾವಾಣಿ ಚಿತ್ರ
(ಎಡದಿಂದ) ಪ್ರೇಮಾ ಜೆ.ಕೆ. (ಕರ್ನಾಟಕ ಅರಣ್ಯಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ), ಲಿಲ್ಲಿ (ರಂಗಭೂಮಿ ಕಲಾವಿದೆ), ಆರ್. ಮಂಗಳಾ (ಸಾಧನ ಮಹಿಳಾ ಸಂಘಟನೆ), ಜಯಲಕ್ಷ್ಮೀ (ಸ್ವರಾಜ್ ಸಂಘಟನೆ), ಜಾನ್ಸಿರಾಣಿ (ಸ್ಲಂ ಮಹಿಳಾ ಸಂಘಟನೆ), ರಾಜೇಶ್ವರಿ (ಗಾರ್ಮೆಂಟ್ ಮತ್ತು ಟೆಕ್ಸ್‌ಟೈಲ್ ಕಾರ್ಮಿಕರ ಸಂಘಟನೆ) ಅವರು ನೆಲತಾಯಿ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕೌಟುಂಬಿಕ ದೌರ್ಜನ್ಯ, ಧಾರ್ಮಿಕ ಕೇಂದ್ರ, ಕೆಲಸದ ಸ್ಥಳಗಳಲ್ಲಿನ ಲೈಂಗಿಕ‌ ಶೋಷಣೆಯಲ್ಲಿಸಿಲುಕಿರುವನಮ್ಮ ಕೂಗುಈ ಸಮಾಜಕ್ಕೆ ಕೇಳಿಸದೇ’ ಎನ್ನುವ ಈ ಮಹಿಳೆಯರು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಲೇ ತಮ್ಮಂತೆಯೇ ನೊಂದ
ವರಿಗೆ ದನಿಯಾಗಲು ಮುಂದಡಿ ಇಟ್ಟಿದ್ದಾರೆ.

‘ಧಾರ್ಮಿಕ ಸಂಸ್ಥೆಗಳಲ್ಲಿ ಲೌಕಿಕ ಬದುಕಿನ ವ್ಯಾಮೋಹ ಹೆಚ್ಚಿ, ಲೈಂಗಿಕ ಕೃತ್ಯಗಳು ನಡೆಯುವುದಾದರೆ, ಆ ಸಂಸ್ಥೆಗಳನ್ನು ಹೇಗೆ ಗೌರವಿಸುವುದು’ ಎಂದು ಪ್ರಶ್ನಿಸುತ್ತಲೇ ಬದುಕಿನ ಕರಾಳ ದಿನಗಳ ನೋವಿನ ಗಂಟನ್ನು ಬಿಚ್ಚಿಟ್ಟಿದ್ದು ತಮಿಳುನಾಡಿನ ಸಿಸ್ಟರ್‌ ಲಿಲ್ಲಿ.

ಸ್ವರಾಜ್‌ ಸಂಘಟನೆ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘2018– ನೆಲತಾಯಿ ಪ್ರಶಸ್ತಿ ಪುರಸ್ಕಾರ’ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ADVERTISEMENT

‘ಸಿಸ್ಟರ್‌ ಆಗಿ ಸೇವಾವಲಯದಲ್ಲಿ ಶ್ರಮಿಸಬೇಕೆನ್ನುವುದು ನನ್ನ ಕನಸಾಗಿತ್ತು. ತಮಿಳುನಾಡಿನ ತೂತುಕುಡಿಯ ಚರ್ಚೊಂದರಲ್ಲಿ ಕಾರ್ಯನಿರ್ವಹಸುತ್ತಿರುವ ವೇಳೆ ಅಲ್ಲಿನ ಪಾದ್ರಿ ನನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡರು. ನನ್ನ ಮಾತಿಗೆ ಒಪ್ಪದಿದ್ದರೆ ನಿನ್ನ ಬಗ್ಗೆ ಕೆಟ್ಟದಾಗಿ ಬಿಂಬಿಸುವುದಾಗಿ ಬೆದರಿಕೆ ಒಡ್ಡುತ್ತಿದ್ದರು. ಹಲವು ಬಾರಿ ನನ್ನ ಮೇಲೆ ಆಕ್ರಮಣ ಮಾಡಿದ್ದೂ ಇದೆ’ ಎಂದು ಹೇಳಿದರು. ಲೈಂಗಿಕ ದೌರ್ಜನ್ಯವನ್ನು ಮೆಟ್ಟಿ ನಿಂತಿರುವ ಅವರು ರಂಗಭೂಮಿ ಕಲಾವಿದೆಯಾಗಿ ಉತ್ತಮ ಬದುಕು ಕಟ್ಟಿಕೊಳ್ಳಲು ಶ್ರಮಿಸುತ್ತಿದ್ದಾರೆ.

ಸ್ಲಂ ಮಹಿಳಾ ಸಂಘಟನೆಯ ಜಾನ್ಸಿ, ‘ಸೇವಾನಗರ, ಆನಂದಪುರದ ಕೊಳಗೇರಿ ಪ್ರದೇಶಗಳಲ್ಲಿ ಪುಟ್ಟ ಕಂದ
ಮ್ಮಗಳ ಮೇಲೆ ಅತ್ಯಾಚಾರ, ಮಹಿಳೆಯರ ಮೇಲೆ ದೌರ್ಜನ್ಯ ನಿರಂತರವಾಗಿ ನಡೆಯುತ್ತಲೇ ಇರುತ್ತವೆ’ ಎಂದು ಹೇಳಿದರು.

‘ಹಲವು ಬಾರಿ ಇಂತಹ ಘಟನೆಗಳು ನಡೆದಾಗ ದೂರು ನೀಡಲು ಹೋದರೆ, ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಿಲ್ಲ. ಅಲ್ಲೇ ಪ್ರತಿಭಟನೆಗೆ ಕೂತ ನಂತರ ಪ್ರಕರಣ ದಾಖಲಿಸಿಕೊಂಡರು’ ಎಂದು ವ್ಯವಸ್ಥೆಯ ಹುಳುಕುಗಳನ್ನು ತೆರೆದಿಟ್ಟರು.

ಪ್ರಾಧ್ಯಾಪಕಿ ಎಂ.ಎಸ್‌.ಆಶಾದೇವಿ ಮಾತನಾಡಿ, ‘ಮಹಿಳೆಯರ ದೇಹದ ಮೇಲೆ ಅತಿಕ್ರಮಣ ಮಾಡುವ ಪುರು ಷರಿಗೆ ಸಮಾಜದಿಂದಲೇ ಬಹಿಷ್ಕಾರ ಹಾಕಬೇಕು.ಕೇವಲ ಕಾನೂನುಗಳ ರಚನೆಯಿಂದ ಹೆಣ್ಣನ್ನು ಕೆಟ್ಟದೃಷ್ಟಿಯಿಂದ ನೋಡುವ ಸಮಾಜದ ದೃಷ್ಟಿಕೋನ ಬದಲಾಗದು. ನಮ್ಮನ್ನು ನಾವು ನೋಡಿಕೊಳ್ಳುವ ರೀತಿ ಬದಲಾಗಬೇಕು. ದೇಹ ಸೂತಕ, ಪಾವಿತ್ರ್ಯತೆ ಹಾಗೂ ಶೀಲ ಎಂಬ ಪರಿಕಲ್ಪನೆಗಳಿಂದ ಹೊರಬರಬೇಕು’ ಎಂದರು.

‘ಮುಟ್ಟಿನಿಂದಲೇ ಹುಟ್ಟು ಎನ್ನುವುದು ವಾಸ್ತವವಾಗಿರುವಾಗ ಯಾವುದು ಮೈಲಿಗೆ? ಮುಟ್ಟಿನ ವಯೋ ಮಾನದ ಮಹಿಳೆಯರ ಪ್ರವೇಶದಿಂದ ಅಯ್ಯಪ್ಪನಿಗೆ ಮೈಲಿಗೆ ಆಯಿತೆಂದರೆ ಮಹಿಳೆಯರ ಧಾರ್ಮಿಕ ಸ್ವಾತಂತ್ರ್ಯ ಕಸಿದಂತಲ್ಲವೆ? ದೇಶವನ್ನು ಆಕ್ರಮಿಸಿಕೊಂಡಿರುವ ಕೋಮುವಾದವನ್ನು ಹೊಡೆದೊಡೆಸಲು ಸ್ತ್ರೀಶಕ್ತಿ ಸಂಘಟಿತವಾಗಲೇಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.