ADVERTISEMENT

ಬೀದಿ ‘ಕಸ’ವಾದವು 85 ನವಜಾತ ಶಿಶುಗಳು

14 ತಿಂಗಳಲ್ಲಿ ರಾಜ್ಯದಲ್ಲಿ 144 ಹಸುಗೂಸುಗಳು ಪತ್ತೆ l ಶಿಶುಗಳನ್ನು ಪಡೆಯಲು ದಂಪತಿಗಳಿಂದ ಅರ್ಜಿ

ಎಂ.ಸಿ.ಮಂಜುನಾಥ
Published 26 ಮಾರ್ಚ್ 2019, 20:41 IST
Last Updated 26 ಮಾರ್ಚ್ 2019, 20:41 IST
   

ಬೆಂಗಳೂರು: ವಿವಾಹಕ್ಕೆ ಮುನ್ನವೇ ಮಗು ಹುಟ್ಟಿತೆಂದು ಸಮಾಜಕ್ಕೆ ಅಂಜಿಯೋ, ಹೆಣ್ಣು ಶಿಶುವೆಂಬ ಕಾರಣಕ್ಕೋ... ಮಗುವನ್ನು ಎಲ್ಲೆಂದರಲ್ಲಿ ಬಿಸಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದ 14 ತಿಂಗಳಲ್ಲಿ ರಾಜ್ಯದ ವಿವಿಧೆಡೆ 144 ನವಜಾತ ಶಿಶುಗಳು ಜೀವಂತವಾಗಿ ಪತ್ತೆಯಾಗಿದ್ದರೆ, 85 ಶಿಶುಗಳು ಶವವಾಗಿ ಸಿಕ್ಕಿವೆ.

ಹೆರಿಗೆ ನಂತರ ಆಸ್ಪತ್ರೆಯಲ್ಲೇ ಮಗುವನ್ನು ಬಿಟ್ಟು ಹೋದಂತಹ 32 ಪ್ರಕರಣಗಳು ವರದಿಯಾಗಿದ್ದರೆ, ಉದ್ಯಾನಗಳಲ್ಲಿ, ಸ್ಮಶಾನಗಳಲ್ಲಿ, ಕಟ್ಟಡ–ದೇವಸ್ಥಾನಗಳ ಪಡಸಾಲೆಗಳಲ್ಲಿ, ನಿರ್ಜನ ಪ್ರದೇಶಗಳಲ್ಲಿ, ಕಸದ ತೊಟ್ಟಿಗಳಲ್ಲೂ ಶಿಶುಗಳು ಸಿಕ್ಕಿವೆ. ಒಂದು ದಿನದ ಹಿಂದಷ್ಟೇ ಜನಿಸಿದ ಗಂಡು ಶಿಶುವೊಂದು ಇದೇ ಮಾರ್ಚ್ 15ರಂದು ಎಚ್‌ಎಎಲ್ ಸಮೀಪದ ಸುರಂಜನ್ ದಾಸ್ ರಸ್ತೆಯ ಮರದ ಕೆಳಗೆ ಪತ್ತೆಯಾಗಿದೆ.

‘12 ವರ್ಷದ ಒಳಗಿನ ಮಕ್ಕಳನ್ನು ಪೋಷಕರು ತ್ಯಜಿಸಿ ಬಂದಾಗ, ಅಂಥವರಿಗೆ ಗರಿಷ್ಠ ಏಳು ವರ್ಷಗಳ ಶಿಕ್ಷೆ ನೀಡಬೇಕು ಎನ್ನುವ ಕಾನೂನಿದೆ. ಐಪಿಸಿಯ 317ನೇ ಕಲಂ ಇದನ್ನು ಸ್ಪಷ್ಟವಾಗಿ ಹೇಳಿದೆ. ಇಂತಹ ಪ್ರಕರಣಗಳಲ್ಲಿ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸದಿದ್ದರೂ, ನ್ಯಾಯಾಲಯ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿರುವ ನಿದರ್ಶನಗಳಿವೆ. ಈ ವಿಚಾರದಲ್ಲಿ ಕಾನೂನು ಇಷ್ಟು ಕಠಿಣವಾಗಿದ್ದರೂ, ಪ್ರಕರಣಗಳಿಗೆ ಕಡಿವಾಣ ಬೀಳುತ್ತಿಲ್ಲ’ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಗಳು.

ADVERTISEMENT

ದಂಪತಿಗಳಿಂದ ಅರ್ಜಿ: ಜೀವಂತವಾಗಿ ಸಿಕ್ಕ ಶಿಶುಗಳನ್ನು ಆರೈಕೆ ಮಾಡಲೆಂದೇ ಸರ್ಕಾರ ಪ್ರತಿ ಜಿಲ್ಲೆಯಲ್ಲೂ ಶಿಶು ಪಾಲನಾ ಕೇಂದ್ರಗಳನ್ನು ಸ್ಥಾಪಿಸಿದೆ. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆ ರಸ್ತೆಯಲ್ಲಿರುವ ಕೇಂದ್ರದಲ್ಲಿ ಸದ್ಯ ಹತ್ತಕ್ಕೂ ಹೆಚ್ಚು ಶಿಶುಗಳು ಆರೈಕೆ ಪಡೆಯುತ್ತಿವೆ.

‘ಎಷ್ಟೋ ದಂಪತಿ ಮಕ್ಕಳಿಲ್ಲವೆಂದು ಕೊರಗುತ್ತಾರೆ. ಆದರೆ, ಕೆಲವರು ಶಿಶುಗಳನ್ನು ಕಸದ ತೊಟ್ಟಿಯಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ಕೇಂದ್ರದಲ್ಲಿರುವ ಶಿಶುಗಳನ್ನು ಸಂತಾನ ಇಲ್ಲದವರಿಗೆ ಕೊಡುವ ಪ್ರಕ್ರಿಯೆ ತುಂಬ ದಿನಗಳಿಂದ ನಡೆಯುತ್ತಿದೆ. ಮಗು ಬೇಕೆಂದು ಅರ್ಜಿ ಸಲ್ಲಿಸುವ ದಂಪತಿಯ ಮನೆ ವಿಳಾಸ ಹಾಗೂ ದಾಖಲೆ ಪಡೆದು, ಶಿಶು ಕೊಟ್ಟು ಕಳುಹಿಸುತ್ತಿದ್ದೇವೆ' ಎಂದು ಕೇಂದ್ರದ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪಾಠ ಕಲಿಸುವಂತಿತ್ತು ಹೈಕೋರ್ಟ್‌ನ ಆ ತೀರ್ಪು

2016ರಲ್ಲಿ ಕುಮಟಾ ತಾಲ್ಲೂಕಿನ ಯುವ ಜೋಡಿ, ಹೆಣ್ಣು ಕೂಸನ್ನು ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರಧಾರ ನದಿ ಬಳಿ ಬಿಟ್ಟು ಬಂದಿತ್ತು. ‘ಮಕ್ಕಳನ್ನು ಬಯಸುವ ದಂಪತಿ ಪೂಜೆ ಸಲ್ಲಿಸಲು ಈ ನದಿ ಬಳಿ ಬರುತ್ತಾರೆ. ಅವರಲ್ಲಿ ಯಾರಾದರೂ ಮಗುವನ್ನು ಎತ್ತಿಕೊಂಡು ಹೋಗಬಹುದು’ ಎಂದು ಅವರು ಎಣಿಸಿದ್ದರು. ಆದರೆ, ಬಿಸಿಲ ಝಳಕ್ಕೆ ಮಗು ಅಸುನೀಗಿತ್ತು.

ಸ್ವಲ್ಪ ಸಮಯದಲ್ಲೇ ದಂಪತಿ ವಾಪಸ್ ಹೋಗಿ ಮಗುವನ್ನು ಅಲ್ಲೇ ಹೂತು ಬಂದಿದ್ದರು. ಆದರೆ, ಮಗುವನ್ನು ಎತ್ತಿಕೊಂಡು ಹೋದವರು, ಬರಿಗೈಲಿ ಹಿಂದಿರುಗಿದ್ದನ್ನುನೋಡಿ ಆಟೊ ಚಾಲಕ ಪೊಲೀಸರಿಗೆ ವಿಷಯ ತಿಳಿಸಿದ್ದ. ಆಗ ಏನೇನೋ ಸಬೂಬು ಹೇಳಿ ದಂಪತಿ ಠಾಣೆಯಿಂದ ಹೊರಬಂದಿದ್ದರು. ಆದರೆ, 4 ದಿನಗಳಲ್ಲೇ ಅವರು ಹೂತಿಟ್ಟಿದ್ದ ಮಗುವನ್ನು ನಾಯಿಯೊಂದು ಕಚ್ಚಿಕೊಂಡು ಬಂದಿತ್ತು. ಆ ನಂತರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಕೊಂಡು ದಂಪತಿಯನ್ನು ಬಂಧಿಸಿದ್ದರು.

‘ಇದು ಕೊಲೆ ಅಲ್ಲದಿದ್ದರೂ, ಮಗುವನ್ನು ಬಿಸಾಡಿ ಬಂದಿದ್ದು ತಪ್ಪು’ ಎಂದು ಘೋಷಿಸಿದ ಹೈಕೋರ್ಟ್, ದಂಪತಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸುವ ಮೂಲಕ ಮಕ್ಕಳನ್ನು ತೊರೆಯುವವರಿಗೆ ಪಾಠ ಕಲಿಸುವಂಥ ಮಹತ್ವದ ತೀರ್ಪು ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.