ADVERTISEMENT

ಕ್ಷುಲ್ಲಕ ಕಾರಣಕ್ಕೆ ಜಗಳ: ನೈಜೀರಿಯಾ ಪ್ರಜೆಯ ಕೊಲೆ

ಚಾಕುವಿನಿಂದ ಇರಿದು ಕೃತ್ಯ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 20:02 IST
Last Updated 3 ನವೆಂಬರ್ 2019, 20:02 IST
ಆರೋಪಿ ಸಾಮ್ಯುವೆಲ್‌
ಆರೋಪಿ ಸಾಮ್ಯುವೆಲ್‌   

ಬೆಂಗಳೂರು: ಕಪಾಳಕ್ಕೆ ಹೊಡೆದ ಕೋಪಕ್ಕೆ ನೈಜೀರಿಯಾ ಪ್ರಜೆಯೊಬ್ಬ, ತನ್ನ ದೇಶದವನೇ ಆಗಿರುವ ಸ್ನೇಹಿತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಸುಕಿನಲ್ಲಿ ನಡೆದಿದೆ.

ಮಾರೋಡೆ (35) ಕೊಲೆಯಾದ ವ್ಯಕ್ತಿ. ಆರೋಪಿ ಸಾಮ್ಯುವೆಲ್‌ನನ್ನು (30) ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ.

ವಿದ್ಯಾರ್ಥಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಮಾರೋಡೆ, ಓದು ಮುಗಿದ ನಂತರವೂ ನಗರದಲ್ಲೇ ಉಳಿದುಕೊಂಡಿದ್ದ. ಸಾಮ್ಯುವೆಲ್‌ ಕೂಡಾ ವಿದ್ಯಾರ್ಥಿ ವೀಸಾದಲ್ಲೇ ಬಂದಿದ್ದು, ಇಬ್ಬರೂ ಜಾನಕೀರಾಮ್‌ ಲೇಔಟ್‌ನಲ್ಲಿ ಬೇರೆ ಬೇರೆ ಮನೆಗಳಲ್ಲಿ ವಾಸಿಸುತ್ತಿದ್ದರು. ಒಂದೇ ದೇಶದವರಾಗಿದ್ದರಿಂದ ಇಬ್ಬರೂ ಆಗಾಗ ಜೊತೆಯಾಗಿ ಊಟಕ್ಕೆ ಹೋಗುತ್ತಿದ್ದರು.

ADVERTISEMENT

ಶನಿವಾರ ಸಂಜೆ 4 ಗಂಟೆಗೆ ಇಬ್ಬರೂ ‘ಕಿಚನ್‌ ಸೆಂಟರ್‌’ ಎಂಬಲ್ಲಿ ಸೇರಿದಾಗ, ಕ್ಷುಲ್ಲಕ ಕಾರಣಕ್ಕೆ ಅವರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಈ ಸಂದರ್ಭದಲ್ಲಿ ಸಾಮ್ಯುವೆಲ್‌ನ ಕೆನ್ನೆಗೆ ಮಾರೋಡೆ ಹೊಡೆದಿದ್ದಾನೆ ಎನ್ನಲಾಗಿದೆ. ಜೊತೆಯಲ್ಲಿದ್ದ ಇತರರು ಇಬ್ಬರನ್ನೂ ಸಮಾಧಾನಪಡಿಸಿ ಕಳುಹಿಸಿದ್ದರು.

’ತನಗೆ ಹೊಡೆದ ಕೋಪದಿಂದ ಕುದಿಯುತ್ತಿದ್ದ ಸಾಮ್ಯುವೆಲ್‌, ಭಾನುವಾರ ನಸುಕಿನ ನಾಲ್ಕು ಗಂಟೆ ಸುಮಾರಿಗೆ ಮಾರೋಡೆ ಮನೆಗೆ ಬಂದು, ಆತನನ್ನು ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಬಿಬಿಎಂ ಓದುತ್ತಿದ್ದ, ಸಾಮ್ಯುವೆಲ್‌ ಬಳಿ ಪಾಸ್‌ಪೋರ್ಟ್‌ ಮತ್ತು ವೀಸಾ ಸಿಕ್ಕಿದೆ. ಕೊಲೆಯಾದ ಮಾರೋಡೆ ಬಳಿಯೂ ಪಾಸ್‌ಪೋರ್ಟ್‌ ಸಿಕ್ಕಿದೆ. ಅವುಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.

ಮಾದಕ ವಸ್ತು ಸಾಗಣೆ: ನೈಜೀರಿಯಾ ದೇಶದ ಹಲವರು ರಾಮಮೂರ್ತಿ ನಗರ, ಹೆಣ್ಣೂರು ಸೇರಿದಂತೆ ನಗರದ ಹೊರವಲಯದಲ್ಲಿ ವಿವಿಧ ಕಡೆ ಅಕ್ರಮವಾಗಿ ನೆಲೆಸಿ, ಮಾದಕ ವಸ್ತು ಮಾರಾಟದಲ್ಲಿ ತೊಡಗಿರುವುದನ್ನು ಸಿಸಿಬಿ ಪೊಲೀಸರು ಇತ್ತೀಚೆಗೆ ಪತ್ತೆ ಹಚ್ಚಿದ್ದರು.

ಕೆ.ಆರ್. ಪುರ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯ ಆಫ್ರಿಕನ್ ಪ್ರಜೆಗಳು ವಾಸವಾಗಿದ್ದಾರೆ. ಅವರಲ್ಲಿ ಕೆಲವರು ಪಾಸ್‍ಪೋರ್ಟ್, ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿದ್ದಾರೆ ಎಂದು ಪ್ರಾದೇಶಿಕ ವಿದೇಶಿ ನೋಂದಣಾಧಿಕಾರಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು.

ಇದೇ ಜುಲೈ ತಿಂಗಳಲ್ಲಿ ನೈಜೀರಿಯಾ ಮತ್ತು ಉಗಾಂಡದ 25 ಮಂದಿ ಮಂದಿಯನ್ನು ವಶಕ್ಕೆ ಪಡೆದು ಪಾಸ್‍ಪೋರ್ಟ್ ಮತ್ತಿತರ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದ್ದರು. ವೀಸಾ ಅವಧಿ ಮುಗಿದ ಬಳಿಕವೂ ನಗರದಲ್ಲಿ ನೆಲೆಸಿದ್ದ ಏಳು ಮಂದಿ ನೈಜೀರಿಯಾ ಪ್ರಜೆಗಳನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೊತ್ತದ ಕೊಕೇನ್‌ ಮತ್ತಿತರ ಮಾದಕ ವಸ್ತು ಜಪ್ತಿ ಮಾಡಲಾಗಿತ್ತು.

‘ಸೂಕ್ತ ದಾಖಲೆ ಪತ್ರಗಳು ಇಲ್ಲದವರ ವಿರುದ್ಧ ಪಾಸ್‍ಪೋರ್ಟ್, ವಿದೇಶಿ ಪ್ರಜೆಗಳ ಕಾಯ್ದೆ ಮತ್ತಿತರ ಕಾಯ್ದೆಗಳಡಿ ಕ್ರಮ ಕೈಗೊಳ್ಳಲಾಗುವುದು. ಅಧಿಕೃತ ದಾಖಲಾತಿಗಳನ್ನು ಹೊಂದದ ಆಫ್ರಿಕನ್ ಪ್ರಜೆಗಳಿಗೆ ಮನೆ ಬಾಡಿಗೆ ನೀಡಿದ ಮನೆ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರಗಿಸಲಾಗುವುದು’ ಎಂದು ಪೊಲೀಸ್‌ ಕಮಿಷನರ್‌ ಭಾಸ್ಕರ ರಾವ್‌ ಇತ್ತೀಚೆಗೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.